ನ.9ರಿಂದ ಕಾನೂನು ಅರಿವು ಆಂದೋಲನ: ಹಿರೇಮಠ
ಚಿಕ್ಕಮಗಳೂರು, ಅ.29: ಸಾಮಾನ್ಯ ಜನರಲ್ಲಿ ಕಾನೂನು ಅರಿವು ಮೂಡಿಸುವುದಕ್ಕಾಗಿ ನ.9 ರಿಂದ 18 ರವರೆಗೆ ಕಾನೂನು ಅರಿವು ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಪ್ರಭಾವತಿ ಎಂ. ಹಿರೇಮಠ ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಲಯದ ಪೂರಕ ಕಟ್ಟಡದ ಮೇಲ್ಭಾಗದ ಸಭಾಂಗಣದಲ್ಲಿ ಕಾನೂನು ಸೇವೆಯ ಬಗ್ಗೆ ಆಂದೋಲನ ಹಮ್ಮಿಕೊಳ್ಳುವ ಕುರಿತ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾನೂನಿನ ಸಹಾಯದ ಅವಶ್ಯಕತೆ ಇದ್ದು, ಹಣಕಾಸಿನ ತೊಂದರೆ ಇರುವ ಹಾಗೂ ಕಾನೂನಿನ ಜ್ಞಾನ ಇಲ್ಲದೆ ಇರುವ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ನೀಡುವುದು ಕಾನೂನು ಪ್ರಾಧಿಕಾರದ ಧ್ಯೇಯವಾಗಿದೆ. ಎಷ್ಟೋ ಜನರಿಗೆ ಕಾನೂನಿನ ಅರಿವಿಲ್ಲದೆ ತಮ್ಮ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಅದಕ್ಕಾಗಿ ಅರಿವು ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ ಅವರು, ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮಹತ್ವದ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಈ 10 ದಿನಗಳ ಅವಧಿಯಲ್ಲಿ ನಗರ ಪ್ರದೇಶದ ಕೊಳಚೆ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಅರಿವು ಮೂಡಿಸುವುದು, ಬಸ್ ನಿಲ್ದಾಣಗಳಲ್ಲಿ ಸಹಾಯ ವಾಣಿ ಮೂಲಕ ಮಾಹಿತಿ ನೀಡುವುದು, ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಕಾನೂನು ಅರಿವು ಕುರಿತು ಜಾಥಾ ಮೂಲಕ ಅರಿವು ಮೂಡಿಸುವುದು, ಕಲಾ ತಂಡಗಳ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಬೀದಿ ನಾಟಕ ಏರ್ಪಡಿಸಲಾಗುವುದು ಎಂದರು.
2ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕೆ.ಎಲ್. ಅಶೋಕ್ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟ್ಟಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದುಶ್ಯಂತ್ ಇತರರಿದ್ದರು.







