ಬ್ರಿಟನ್ ಕ್ಷಮೆಯಾಚಿಸಬೇಕೆಂಬ ನಿರ್ಣಯಕ್ಕೆ 14 ಮಂದಿ ಬ್ರಿಟಿಷ್ ಸಂಸದರ ಬೆಂಬಲ
ಜಲಿಯಾನ್‌ವಾಲಾಭಾಗ್ ಹತ್ಯಾಕಾಂಡ

ಲಂಡನ್,ಅ.29: ಭಾರತದ ಸ್ವಾತಂತ್ರ ಹೋರಾಟದ ಕರಾಳ ಅಧ್ಯಾಯವಾದ 1919ರ ಜಲಿಯನ್‌ವಾಲಾಭಾಗ್ ಹತ್ಯಾಕಾಂಡಕ್ಕಾಗಿ ಕ್ಷಮೆಯಾಚಿಸಬೇಕೆಂದು ಬ್ರಿಟಿಷ್ ಸರಕಾರವನ್ನು ಆಗ್ರಹಿಸುವ ನಿರ್ಣಯವನ್ನು ಬೆಂಬಲಿಸಿ ಈವರೆಗೆ 14 ಬ್ರಿಟಿಷ್ ಸಂಸದರು ಸಹಿಹಾಕಿದ್ದಾರೆ. ಅಕ್ಟೋಬರ್ 17ರಂದು ಭಾರತೀಯ ಮೂಲದ ಬ್ರಿಟಿಷ್ ಸಂಸದ ವೀರೇಂದ್ರ ಶರ್ಮಾ ನಿರ್ಣಯವನ್ನು ಸಂಸತ್‌ನ ಕೆಳಮನೆ (ಹೌಸ್‌ಆಫ್ ಕಾಮನ್ಸ್)ಯಲ್ಲಿ ಮಂಡಿಸಿದ್ದರು. ‘ಜಲಿಯಾನ್‌ವಾಲಾಭಾಗ್ ಹತ್ಯಾಕಾಂಡ 1919’ ಎಂಬ ಹೆಸರಿನ ನಿರ್ಣಯಕ್ಕೆ ಇತರ 13 ಸಂಸದರು ಸಹಿಹಾಕಿದ್ದಾರೆಂದು ವೀರೇಂದ್ರ ಶರ್ಮಾ ಅವರ ಕಾರ್ಯಾಲಯವು, ಹರ್ಯಾಣದ ಶಾಸಕಾಂಗ ವ್ಯವಹಾರಗಳ ಸಚಿವ ರಾಮ್‌ಬಿಲಾಸ್ ಶರ್ಮಾ ಅವರಿಗೆ ರವಾನಿಸಿದ ಈಮೇಲ್ ಸಂದೇಶದಲ್ಲಿ ತಿಳಿಸಿದೆ.
2016ರ ನವೆಂಬರ್ 14ರಂದು ರಾಮ್ ಬಿಲಾಸ್ ಶರ್ಮಾ ಅವರು ಬ್ರಿಟಿಷ್ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣದ ಜಲಿಯಾನಾವಾಲಾಭಾಗ್ ಹತ್ಯಾಕಾಂಡವನ್ನು ಪ್ರಸ್ತಾಪಿಸಿದ್ದರು. ತನ್ನ ಭಾಷಣದಿಂದ ಪ್ರಭಾವಿತರಾಗಿ ವೀರೇಂದ್ರ ಶರ್ಮಾ ಅವರು ಈ ನಿರ್ಣಯವನ್ನು ಸಂಸತ್‌ನಲ್ಲಿ ಮಂಡಿಸಿದ್ದರೆಂದು ರಾಮ್‌ಬಿಲಾಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
1919ರ ಎಪ್ರಿಲ್‌ನಲ್ಲಿ ಜಲಿಯಾನ್‌ವಾಲಾಭಾಗ್‌ನಲ್ಲಿ ಕರ್ನಲ್ ರೆಜಿನಾಲ್ಡ್ ಡಯರ್‌ನ ನೇತೃತ್ವದಲ್ಲಿ ಬ್ರಿಟಿಷ್ ಸೇನೆಯು ಪ್ರತಿಭಟನೆ ನಡೆಸುತ್ತಿದ್ದ ಸ್ವಾತಂತ್ರ ಹೋರಾಟಗಾರರ ಮೇಲೆ ನಿರ್ದಯವಾಗಿ ಗುಂಡಿಕ್ಕಿ, ನೂರಾರು ಮಂದಿಯನ್ನು ಹತ್ಯೆಗೈದಿತ್ತು.







