ಸಂಘಪರಿವಾರದ ‘ಮೈಸೂರು ಚಲೋ’ಗೆ ಪೊಲೀಸರಿಂದ ತಡೆ
ಕುಶಾಲನಗರ, ಅ.29: ರಾಜ್ಯದಲ್ಲಿ ಸಂಘಪರಿವಾರದ ಕಾರ್ಯಕರ್ತರ ಸರಣಿ ಹತ್ಯೆ ಖಂಡಿಸಿ ಸಂಘ ಪರಿವಾರ ಹಮ್ಮಿಕೊಂಡಿದ್ದ ‘ಮೈಸೂರು ಚಲೋ’ ಕಾರ್ಯಕ್ರಮಕ್ಕೆ ಪೊಲೀಸರು ನಿಷೇಧ ಹೇರಿದ್ದಾರೆ.
ಕುಶಾಲನಗರದದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ರವಿವಾರ ಬೆಳಗ್ಗೆ ಮೈಸೂರಿಗೆ ತೆರಳಲು ಮುಂದಾದಾಗ ಪೊಲೀಸರು ಅವರನ್ನು ಅಡ್ಡಗಟ್ಟಿ ವಶಕ್ಕೆ ಪಡೆದರು.
ಮುಂಜಾಗೃತಾಕ್ರಮವಾಗಿ ಪೊಲೀಸ್ ಇಲಾಖೆ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿತ್ತು. ಇದಕ್ಕೂ ಮೊದಲು ಸಂಘ ಪರಿವಾರದ ಕಾರ್ಯಕರ್ತರು ಐಬಿ ರಸ್ತೆಯ ಮೂಲಕ ಗಣಪತಿ ದೇವಾಲಯದವರೆಗೆ ಕಾಲ್ನಡಿಗೆ ಮೂಲಕ ಸಾಗಿದಾಗ ದೇವಾಲಯದ ಮುಂದೆ ಪೊಲೀಸರು ತಡೆದರು.
ಈ ಸಂದರ್ಭ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಕಾರ್ಯಕರ್ತರನ್ನು ಪೊಲೀಸರು ಗ್ರಾಮಾಂತರ ಠಾಣೆಗೆ ಕರೆದೊಯ್ದರು.
ಈ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್ ಮಹೇಶ್ ಮಾತನಾಡಿ, ಮೈಸೂರು ಚಲೋ ಕಾರ್ಯಕ್ರಮಕ್ಕೆ ಸಂಘಪರಿವಾರದ ಕಾರ್ಯಕರ್ತರು ಹೋಗುವ ವಿಷಯ ಶನಿವಾರ ತಿಳಿಯಿತು. ಸರಕಾರದ ಆದೇಶದಂತೆ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ತಡೆದಿದ್ದೇವೆ. ಸರಕಾರದ ಆದೇಶದಂತೆ ಘೋಷಣೆ ಕೂಗಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.
ನಂತರ ಮಾತನಾಡಿದ ಮಂಗಳೂರು ಪ್ರಾಂತ ಸಂಚಾಲಕ ಉಲ್ಲಾಸ್, ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಬೇ ಡಿಕೆ ಇಟ್ಟುಕೊಂಡು ಜಾಥಾ ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನಿಂದ ಕುಶಾಲನಗರದವರೆಗೆ ಇಲ್ಲದ 144 ಸೆಕ್ಷನ್ ಈಗ ಇದೆ. ಇದು ರಾಜ್ಯ ಸರಕಾರದ ಕುತಂತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೃಷ್ಣಪ್ಪ, ಲಕ್ಷ್ಮೀನಾರಾಯಣ, ಮಂಜುನಾಥ್, ನವನೀತ್, ಮಧು ಮತ್ತಿತರರು ಇದ್ದರು.







