ತುಳು ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಪಿ.ಎಂ.ರವಿ ಕರೆ
ಮಡಿಕೇರಿ, ಅ.29: ತುಳು ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳ ಬೆಳವಣಿಗೆಗೆ ಮತ್ತು ಅವುಗಳನ್ನು ಶಾಶ್ವತವಾಗಿ ಉಳಿಸಿ, ಬೆಳೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಟ್ಟು 13 ತುಳು ಭಾಷಿಕ ಸಮುದಾಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ ಚಟುವಟಿಕೆಯನ್ನು ಚುರುಕುಗೊಳಿಸಿರುವುದು ತುಳುವೆರೆ ಜನಪದ ಕೂಟದ ಹೆಗ್ಗಳಿಕೆಯಾಗಿದೆ ಎಂದು ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ರವಿವಾರ ನಡೆದ ಕೂಟದ ಮಡಿಕೇರಿ ನಗರ ಸಮಿತಿ ರಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಸುಮಾರು 2 ಲಕ್ಷಕ್ಕೂ ಅಧಿಕ ತುಳು ಭಾಷಿಕರಿದ್ದು, ತಾಲೂಕು, ಹೋಬಳಿ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ಇದೀಗ ಮಡಿಕೇರಿ ನಗರ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದ್ದು, ತುಳು ಭಾಷಿಕರಿಂದ ನಿರೀಕ್ಷೆಗೂ ಮೀರಿ ಸಹಕಾರ ದೊರೆಯುತ್ತಿದೆ ಎಂದರು.
ಗ್ರಾಮ ಸಮಿತಿಗಳನ್ನು ಕೂಡ ರಚಿಸಲಾಗುತ್ತಿದ್ದು, ಈ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲಿದೆ. ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ತುಳು ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿದ್ದು, ಕೂಟವನ್ನು ಬಲಗೊಳಿಸಲಾಗುತ್ತಿದೆ. ಸುಮಾರು 3,500 ವರ್ಷಗಳ ಇತಿಹಾಸ ಹೊಂದಿರುವ ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಎಲ್ಲಾ ಅರ್ಹತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೂಟದ ಸ್ಥಾಪಕ ಕಾರ್ಯದರ್ಶಿ ಹರೀಶ್ ಆಳ್ವ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸಮಾಜದ ಬಂಧುಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸಬೇಕಾಗಿದೆ. ತುಳು ಭಾಷಿಕರು ಸ್ವಾವಲಂಬಿಗಳಾಗಿ ಬದುಕಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಈ ವೇಳೆ ಮಡಿಕೇರಿ ನಗರ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತುಳುನಾಡು ಸಹಕಾರ ಸಂಘದ ಸ್ಥಾಪಕ ಪ್ರವರ್ತಕ ಹಾಗೂ ಅಧ್ಯಕ್ಷ ರತ್ನಾಕರ ಶೆಟ್ಟಿ , ಅಧ್ಯಕ್ಷತೆ ವಹಿಸಿದ್ದ ಕೂಟದ ಜಿಲ್ಲಾಧ್ಯಕ್ಷ ಶೇಖರ್ ಭಂಡಾರಿ ಮಾತನಾಡಿದರು. ತುಳುವೆರ ಜನಪದ ಕೂಟದ ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಭುರೈ , ಉಪಾಧ್ಯಕ್ಷ ಎಂ.ಡಿ.ಸುರೇಶ್ ಕುಲಾಲ್, ಜಿಲ್ಲಾ ಸಲಹೆಗಾರ ಎಂ.ಡಿ.ನಾಣಯ್ಯ ಕುಲಾಲ್, ಗೌರವ ಸಲಹೆಗಾರ ಬಾಲಕೃಷ್ಣ ರೈ, ಮತ್ತಿತರರು ಉಪಸ್ಥಿತರಿದ್ದರು.
ಪದಾಧಿಕಾರಿ ಪುರುಷೋತ್ತಮ ಪ್ರಾರ್ಥಿಸಿದರು. ಬಿ.ಎಸ್.ಜಯಪ್ಪ ಕಾರ್ಯಕ್ರಮ ನಿರೂಪಿಸಿದರು.







