ಗಾಂಧಿ ಹತ್ಯೆ ಪ್ರಕರಣ ತಿರುಚಲು ಅವರ ಹಂತಕರಿಂದ ಅಭಿಯಾನ: ತುಷಾರ್ ಗಾಂಧಿ

ಹೊಸದಿಲ್ಲಿ, ಅ. 30: “ನಾನು ತುಷಾರ್ ಅರುಣ್ ಮಣಿಲಾಲ್ ಮೋಹನ್ದಾಸ್ ಕರಮ್ಚಂದ್ ಗಾಂಧಿ, ಮಹಾತ್ಮಾ ಗಾಂಧಿ ಅವರ ಮೊಮ್ಮಗ” ಎಂದು ತುಷಾರ್ ಗಾಂಧಿ ಸೋಮವಾರ ಟ್ವೀಟ್ ಮಾಡಿದ್ದಾರೆ.
ಮಹಾತ್ಮಾ ಗಾಂಧಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಮರು ಆರಂಭಿಸಲು ವಿರೋಧ ವ್ಯಕ್ತಪಡಿಸುತ್ತಿರುವ ತುಷಾರ್ ಗಾಂಧಿ ಅವರು ತಮ್ಮ ಅಧಿಕಾರ ಸ್ಥಾನ ತಿಳಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಈ ಟ್ವೀಟ್ ಮಾಡಿದ್ದಾರೆ.
ತಮ್ಮ ಕೈಗಂಟಿದ ರಕ್ತದ ಕಲೆಗಳನ್ನು ತೊಳೆದುಕೊಳ್ಳುವ ಉದ್ದೇಶದಿಂದ ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣವನ್ನು ತಿರುಚಲು ಬಾಪು ಹತ್ಯೆ ನಡೆಸಿದವರು ಅಭಿಯಾನ ಆರಂಭಿಸಿದ್ದಾರೆ ಎಂದು ತುಷಾರ್ ಗಾಂಧಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
2007ರ ಲೆಟ್ಸ್ ಕಿಲ್ ಗಾಂಧಿ:
‘ಎ ಕ್ರಾನಿಕಲ್ ಆಫ್ ಹಿಸ್ ಲಾಸ್ಟ್ ಡೇ’, ‘ದಿ ಕಾನ್ಸ್ಪಿರಸಿ, ಮರ್ಡರ್’, ಇನ್ವೆಸ್ಟಿಗೇಶನ್ ಆ್ಯಂಡ್ ಟ್ರಯಲ್ ಪುಸ್ತಕದ ಮುಖಪುಟದ ಚಿತ್ರವನ್ನು ಪೋಸ್ಟ್ ಮಾಡಿರುವ ತುಷಾರ್ ಗಾಂಧಿ, ಸುಪ್ರೀಂ ಕೋರ್ಟ್ ಗಮನಿಸಲಿ, ಪ್ರಕರಣಕ್ಕೆ ಸಂಬಂಧಿಸಿ ಇದು ನನ್ನ ಅಧಿಕಾರ ಸ್ಥಾನ ಎಂದು ಹೇಳಿದ್ದಾರೆ.
“ನಾನು ತುಷಾರ್ ಅರುಣ್ ಮಣಿಲಾಲ್ ಮೋಹನ್ದಾಸ್ ಕರಮ್ಚಂದ್ ಗಾಂಧಿ. ಇದು ನನ್ನ ಅಧಿಕಾರ ಸ್ಥಾನ. ಸುಪ್ರೀಂ ಕೋರ್ಟ್ ಗಮನಹರಿಸಲಿ” ಎಂದು ತುಷಾರ್ ಗಾಂಧಿ ಇನ್ನೊಂದು ಟ್ವೀಟ್ ಮಾಡಿದ್ದಾರೆ.







