ಬೆಳೆ ಕೈಗೆ ಬಂದ ರೈತನಿಗಾದ ಸಂತೋಷ ನನಗಾಗಿದೆ: ಕೃಷ್ಣ ಯಾಜಿ ಬಳ್ಕೂರು
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಉಡುಪಿ, ಅ.30: ‘ರೈತನೊಬ್ಬನಿಗೆ ಬೆವರು ಸುರಿಸಿ ದುಡಿದ ಬೆಳೆ ಕೈಗೆ ಬಂದಾಗ ಆಗುವಷ್ಟೇ ಸಂತೋಷ ಇಂದು ನನಗಾಗಿದೆ’ ಎಂದು ಯಕ್ಷಗಾನ ಕ್ಷೇತ್ರದ ನಾಲ್ಕು ದಶಕಗಳ ಕಲಾಸೇವೆಗಾಗಿ ಇಂದು ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಯಕ್ಷಗಾನ ಕಲಾವಿದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ವಾಲ್ಗಳ್ಳಿಯ ಕೃಷ್ಣ ಯಾಜಿ ಬಳ್ಕೂರು ಹೇಳಿದ್ದಾರೆ.
ಪ್ರಶಸ್ತಿ ಪಡೆದಿರುವುದಕ್ಕಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಅಭಿನಂದಿಸಿದಾಗ ತನಗೆ ಪ್ರಶಸ್ತಿಯಿಂದ ಅತ್ಯಂತ ಖುಷಿಯಾಗಿದೆ ಎಂದರು. ನನ್ನ ನಾಲ್ಕು ದಶಕಗಳ ಕಲಾ ಸೇವೆಯನ್ನು ಗುರುತಿಸಿರುವುದಕ್ಕಾಗಿ ರಾಜ್ಯ ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಆಭಾರಿ ಎಂದರು.
61ರ ಹರೆಯದ (ಹುಟ್ಟಿದ್ದು 1956 ಹೊನ್ನಾವರದ ಬಳ್ಕೂರಿನಲ್ಲಿ) ಕೃಷ್ಣ ಯಾಜಿ ಅವರನ್ನು ಯಕ್ಷಗಾನಕ್ಕೆ ಕರೆ ತಂದವರು ಖ್ಯಾತ ಕಲಾವಿದ ಕೆರೆಮನೆ ಮಹಾಬಲ ಹೆಗಡೆ. ಎಸೆಸೆಲ್ಸಿ ಮುಗಿಸಿದ ತಾನು ಅವರ ಪ್ರೇರಣೆಯಿಂದ ಯಕ್ಷಗಾನಕ್ಕೆ ಬಂದೆ. ಅನಂತರ ನಾನು ಕೆರೆಮನೆಯ ಕುಟುಂಬದ ಎಲ್ಲಾ ಖ್ಯಾತನಾಮರೊಂದಿಗೆ ಮಾತ್ರವಲ್ಲ ಚಿಟ್ಟಾಣಿ, ಗೋಡೆ, ಶೇಣಿ, ಕುಂಬ್ಳೆ, ಗೋವಿಂದ ಭಟ್, ಜಲವಳ್ಳಿ ಅವರೊಂದಿಗೆ ವೇಷ ಮಾಡಿ ಕುಣಿದಿದ್ದೇನೆ. ಇದು ನನಗೆ ತೃಪ್ತಿ ತಂದ ನನ್ನ ಸಾಧನೆ ಎಂದರು.
ನಾಲ್ಕು ದಶಕಗಳ ಯಕ್ಷಗಾನದ ಬದುಕಿನಲ್ಲಿ 29 ವರ್ಷಗಳ ಕಾಲ ತಾನು ಸಾಲಿಗ್ರಾಮ ಮೇಳವೊಂದರಲ್ಲೇ ದುಡಿದೆ. ಇದು ಸಾಧ್ಯವಾಗಿರುವುದು ಸಾಲಿಗ್ರಾಮ ಮೇಳದ ಯಜಮಾನರಾದ ಪಳ್ಳಿ ಸೋಮನಾಥ ಹೆಗ್ಡೆ ಹಾಗೂ ಈಗಿನ ಯಜಮಾನರಾದ ಕಿಶನ್ ಹೆಗ್ಡೆಯವರಿಂದ. ಉಳಿದಂತೆ ಕೌಟುಂಬಿಕ ಹಾಗೂ ಆರೋಗ್ಯದ ಕಾರಣಕ್ಕಾಗಿ ಮನೆಯಲ್ಲೇ ಇದ್ದು ಯಾರಾದರೂ ಕರೆದಾಗ, ಆರೋಗ್ಯ ಸರಿಯಿದ್ದಾಗ ಹೋಗಿ ವೇಷ ಮಾಡಿ ಬರುತಿದ್ದೇನೆ ಎಂದರು.
ಈಗಲೂ ಆರೋಗ್ಯ ಸರಿಯಿದ್ದಾಗ ತಾನು ಯಾರು ಕರೆದರೂ ಹೋಗಿ ಕುಣಿದು ಬರುತ್ತಿದ್ದೇನೆ. ಜನರಿಂದ ಈಗಲೂ ಸಿಗುತ್ತಿರುವ ಪ್ರೀತಿಯೇ ನನಗೆ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೇರಣೆಯಾಗಿದೆ ಎಂದು ಕೃಷ್ಣ ಯಾಜಿ ತಿಳಿಸಿದರು.







