ನಾಟ್ಯಗುರು ಮೋಹನ್ ಕುಮಾರ್ ಉಳ್ಳಾಲ್ ರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಉಳ್ಳಾಲ, ಅ. 30: ನಾಟ್ಯಗುರು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾತಿಲಕ ಮೋಹನ್ ಕುಮಾರ್ ಉಳ್ಳಾಲ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯು ಅರಸಿಕೊಂಡು ಬಂದಿದೆ.
ಹಿರಿಯ ನಾಟ್ಯಗುರು ಮೋಹನ್ ಕುಮಾರ್ ಉಳ್ಳಾಲ್ ಅವರು ಹಲವು ವರ್ಷಗಳಿಂದ ಪಂದನಲ್ಲೂರು ಭರತನಾಟ್ಯ ಶೈಲಿಯಲ್ಲಿ ಸಾಧನೆ ಮಾಡಿ ಅಪ್ರತಿಮ ಸಾಧಕರಾಗಿ ಸಮಾಜದಲ್ಲಿ ಗುರುತಿಸಿಕೊಂಡು ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿದ್ದರು. ಇದೀಗ ರಾಜ್ಯೋತ್ಸವ ಪ್ರಶಸ್ತಿಗೆ ಇವರು ಆಯ್ಕೆಯಾಗಿ ರುವುದು ಇವರ ನೃತ್ಯ ಕೇತ್ರದ ಸಾಧನೆಗೆ ಒಲಿದ ಹಿರಿಮೆಯಾಗಿದೆ.
ನೃತ್ಯದ ಆರಂಭಿಕ ಶಿಕ್ಷಣವನ್ನು ಮಾಸ್ಟರ್ ವಿಠಲ್ ಅವರಿಂದ ಪಡೆದಿದ್ದ ಮೋಹನ್ ಕುಮಾರ್ ಉಳ್ಳಾಲ್ ಅವರು ಬಳಿಕ ಕೇರಳದ ತ್ರಿಪುಣ ತುರೈ ದಿವಂತಗ ರಾಜನ್ ಅಯ್ಯರ್ ಅವರಿಂದ ನೃತ್ಯ ಶಿಕ್ಷಣವನ್ನು ಪಡೆದು ಮುನ್ನಡೆದರು. ತಮಿಳುನಾಡಿನ ಪ್ರಸಿದ್ಧ ಭರತನಾಟ್ಯಗುರು ಅಭಿನಯ ಶಿರೋಮಣಿ ದಿವಂಗತ ರಾಜರತ್ನಂ ಪಿಳ್ಳೈ ಅವರಲ್ಲಿ ಉನ್ನತ ಮಟ್ಟದ ಪಂದನಲ್ಲೂರು ಶೈಲಿಯ ಭರತನಾಟ್ಯ ಶಿಕ್ಷಣ ಪಡೆದು ಈ ಕ್ಷೇತ್ರದ ಸಾಧನೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು.
ಇವರು 1957ರಲ್ಲಿ ಉಳ್ಳಾಲದಲ್ಲಿ ತಮ್ಮದೇ ನಾಟ್ಯನಿಕೇತನ ನೃತ್ಯ ಕೇಂದ್ರವನ್ನು ಆರಂಭಿಸಿದ್ದರು. ನಾಟ್ಯನಿಕೇತನ ನೃತ್ಯಕೇಂದ್ರವನ್ನು ಆರಂಭಿಸುವ ಮೂಲಕ ಕರಾವಳಿಯಲ್ಲಿ ನೃತ್ಯ ಶಿಕ್ಷಣದ ಶ್ರೀಮಂತಿಕೆಗೆ ಕಾರಣರಾಗಿದ್ದಾರೆ. ಅಲ್ಲದೆ ಈ ಮೂಲಕ ಗುರುಶಿಷ್ಯ ಪರಂಪರೆಯಲ್ಲಿ ಶಾಸ್ತ್ರೀಯ ನೃತ್ಯ ಶಿಕ್ಷಣವನ್ನು ನೀಡಿ ಅಪಾರ ಶಿಷ್ಯ ಪರಂಪರೆಯನ್ನು ಬೆಳೆಸಿದ ಕೀರ್ತಿ ಉಳ್ಳಾಲ ಮೋಹನ್ ಕುಮಾರ್ ಅವರದ್ದು.
ಸಾಧನೆಗೆ ಒಲಿದು ಬಂದ ಪುರಸ್ಕಾರಗಳು
1985ರಲ್ಲಿ ಕರ್ನಾಟಕ ಸರಕಾರದ ನೃತ್ಯ ಅಕಾಡಮಿಯ ನೃತ್ಯ ಪುರಸ್ಕಾರ
1992ರಲ್ಲಿ ರಾಜ್ಯ ಸಂಗೀತ ನೃತ್ಯ ಅಕಾಡಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ
2012ರಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಾಂತಲಾ ನಾಟ್ಯ ಪ್ರಶಸ್ತಿ
1989ರಲ್ಲಿ ಸಾರ್ವಜನಿಕವಾಗಿ ನಾಟ್ಯಮೋಹನ ಬಿರುದಿನೊಂದಿಗೆ ಹುಟ್ಟೂರ ಸನ್ಮಾನ ಸೇರಿದಂತೆ ಹಲವು ಪ್ರಶಸ್ತಿ, ಬಿರುದು ಸಂದಿವೆ. ಇದೀಗ ಪ್ರತಿಷ್ಟಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಇವರನ್ನು ಅರಸಿಕೊಂಡು ಬಂದಿದೆ.
ಸಂತಸ ತಂದಿದೆ
ಕಳೆದ 60 ವರ್ಷಗಳಿಂದ ಪಂದನಲ್ಲೂರು ಶೈಲಿಯ ಭರತನಾಟ್ಯವನ್ನು ಅನೇಕ ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟಿದ್ದೇನೆ. ಪ್ರಶಸ್ತಿ ಘೋಷಣೆ ಆಗಿರುವುದು ಸಂತಸ ತಂದಿದೆ. ರಾಜ್ಯೋತ್ಸವ ಪ್ರಶಸ್ತಿಯು ಶಾಂತಲಾ ಪ್ರಶಸ್ತಿಗಿಂತ ಮುಂಚೆಯೇ ಸಿಗಬೇಕಿತ್ತು. ಆದರೆ ತಡವಾಗಿಯಾದರೂ ಸರಕಾರ ಗುರುತಿಸಿರುವುದು ಸಂತಸವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 95ಶೇ. ರಷ್ಟು ನನ್ನ ಶಿಷ್ಯರೇ ನೃತ್ಯ ಗುರುಗಳಾಗಿ ನನ್ನ ಪರಂಪರೆ ಮುಂದುವರಿಸಿದ್ದಾರೆ. ದೇಶ ವಿದೇಶಗಳಲ್ಲಿಯೂ ನನ್ನ ಶಿಷ್ಯರು ನೃತ್ಯ ಶಿಕ್ಷಣ ನೀಡುತ್ತಿದ್ದಾರೆ.
-ಮೋಹನ್ ಕುಮಾರ್ ಉಳ್ಳಾಲ್, ನಾಟ್ಯಗುರು







