ಡಿಜಿ-ಐಜಿಪಿ ಆರ್.ಕೆ.ದತ್ತಾ ಸೇರಿ ಐವರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ
ಚಿನ್ನದ ವ್ಯಾಪಾರಿ ದಂಪತಿಯ ಅಕ್ರಮ ಬಂಧನ ಪ್ರಕರಣ
ಬೆಂಗಳೂರು, ಅ.30: ಚಿನ್ನದ ವ್ಯಾಪಾರಿ ದಂಪತಿಯನ್ನು ಅಕ್ರಮ ಬಂಧನದಲ್ಲಿರಿಸಿದ ಮಂಗಳೂರು ಪೊಲೀಸರ ಕ್ರಮದ ವಿರುದ್ಧ ನೀಡಿದ ದೂರು ಆಧರಿಸಿ ಕ್ರಮ ಜರಗಿಸದ ವಿಚಾರ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಡಿಜಿ-ಐಜಿಪಿ ಆರ್.ಕೆ.ದತ್ತಾ, ಎಡಿಜಿಪಿ ಸಂಜಯ್ ಸಹಾಯ್, ಮಂಗಳೂರು ಉತ್ತರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶಾಂತರಾಮ್, ಸಬ್ ಇನ್ಸಪೆಕ್ಟರ್ ಎಂ.ಸಿ.ಮದನ್‌ಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದೆ.
ಈ ಸಂಬಂಧ ಮಂಗಳೂರು ಚಿನ್ನದ ವ್ಯಾಪಾರಿ ವಿದ್ಯಾನಂದರಾವ್, ಲಲಿತ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮತ್ತು ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಐವರು ಅಧಿಕಾರಿಗಳಿಗೆ ನವೆಂಬರ್ 15ರಂದು ಖುದ್ದು ಹಾಜರಾಗಲು ಆದೇಶಿಸಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ಮಂಗಳೂರು ಉತ್ತರ ಠಾಣಾ ಪೊಲೀಸರು ಚಿನ್ನದ ವ್ಯಾಪಾರಿ ವಿದ್ಯಾನಂದರಾವ್, ಲಲಿತ ದಂಪತಿಯನ್ನು ಅಕ್ರಮವಾಗಿ ಐದು ದಿನ ಅಕ್ರಮ ಬಂಧನದಲ್ಲಿಟ್ಟರೂ ಎಫ್‌ಐಆರ್ ಅನ್ನು ದಾಖಲಿಸಿಲ್ಲ. ಈ ಕ್ರಮವನ್ನು ಪ್ರಶ್ನಿಸಿ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಡಿಜಿ-ಐಜಿಪಿ ಆರ್.ಕೆ.ದತ್ತಾ, ಎಡಿಜಿಪಿ ಸಂಜಯ್ ಸಹಾಯ್‌ಗೆ ದೂರು ನೀಡಿದರೂ ಯಾವುದೆ ಕಾನೂನು ಕ್ರಮವನ್ನು ಕೈಗೊಂಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಈ ಐವರು ಅಧಿಕಾರಿಗಳು ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದು, ನವೆಂಬರ್ 15ರಂದು ಕೋರ್ಟ್‌ಗೆ ಖುದ್ದು ಹಾಜರಾಗಲು ಆದೇಶಿಸಿ ವಿಚಾರಣೆಯನ್ನು ಮುಂದೂಡಿತು. ಚಿನ್ನದ ವ್ಯಾಪಾರಿಗಳನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಇನ್ ಸ್ಪೆಪೆಕ್ಟರ್ ಶಾಂತರಾಮ್ ಅವರು ಜುಲೈ 21ರಂದು ಬಂಧನ ಮಾಡಿ, ಐದು ದಿನ ಕಳೆದರೂ ಎಫ್‌ಐಆರ್ ದಾಖಲಿಸಿರಲಿಲ್ಲ. ಹೀಗಾಗಿ, ಚಿನ್ನದ ವ್ಯಾಪಾರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.







