ಅರ್ಜಿ ವಿಲೇ ಅಧಿಕಾರ ಗಣಿ-ಭೂ ವಿಜ್ಞಾನ ಇಲಾಖೆಗೆ: ಸಚಿವ ಟಿ.ಬಿ.ಜಯಚಂದ್ರ
ಕೃತಕ ಮರಳು ಉತ್ಪಾದಕ ಘಟಕ
ಬೆಂಗಳೂರು, ಅ. 30: ಕೃತಕ ಮರಳು (ಎಂ-ಸ್ಯಾಂಡ್) ಉತ್ಪಾದನಾ ಘಟಕಗಳ ಸ್ಥಾಪನೆಗೆ ಅನುಮತಿ ನೀಡುವ ಅಧಿಕಾರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಮರಳಿನ ಕೊರತೆ ಹಿನ್ನೆಲೆಯಲ್ಲಿ ಕೃತಕ ಮರಳು ಉತ್ಪಾದನೆ ಪ್ರೋತ್ಸಾಹಿಸಲು ಎಂ-ಸ್ಯಾಂಡ್ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಆ ಅರ್ಜಿಗಳ ವಿಲೇವಾರಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆ (ಟಾಸ್ಕ್‌ಫೋರ್ಸ್) ರಚನೆ ಮಾಡಲಾಗಿತ್ತು. ಆದರೆ, ಈ ಕಾರ್ಯಪಡೆ ಅರ್ಜಿಗಳನ್ನು ವಿಲೇ ಮಾಡುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಆ ಅಧಿಕಾರಿವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡಲಾಗಿದೆ ಎಂದು ಹೇಳಿದರು.
ಕೃತಕ ಮರಳು ಉತ್ಪಾದನಾ ಘಟಕ ಸ್ಥಾಪನೆಗೆ ಈವರೆಗೂ 7 ಸಾವಿರದಿಂದ 8 ಸಾವಿರ ಅರ್ಜಿಗಳು ಬಂದಿದ್ದು, ಆ ಪೈಕಿ 60 ಘಟಕಗಳಿಗೆ ಅನುಮತಿ ನೀಡಿದ್ದು, ವಾರ್ಷಿಕ 18ರಿಂದ 20ಮಿಲಿಯನ್ ಮೆಟ್ರಿಕ್ ಟನ್ ಕೃತಕ ಮರಳು ಉತ್ಪಾದನೆಯಾಗುತ್ತಿದೆ. ಆದರೆ, 30ರಿಂದ 35 ಮಿ.ಮೆಟ್ರನ್ ಟನ್ ಕೃತಕ ಮರಳಿನ ಬೇಡಿಕೆ ಇದೆ ಎಂದು ತಿಳಿಸಿದರು.
ಹೊಸ ವರ್ಷಕ್ಕೆ ವಿದೇಶಿ ಮರಳು: ಫಿಲಿಫೈನ್ಸ್, ಮಲೇಶಿಯಾ ಸೇರಿ ವಿದೇಶಗಳಿಂದ ಮರಳು ಆಮದು ಮಾಡಿಕೊಳ್ಳಲು ಹೊಸ ಕಾನೂನು ರೂಪಿಸಿದ್ದು, ಶೀಘ್ರದಲ್ಲೆ ಸಂಪುಟದಲ್ಲಿ ಚರ್ಚಿಸಿ, ಅನುಮೋದನೆ ಪಡೆದುಕೊಳ್ಳಲಾಗುವುದು ಎಂದ ಅವರು, 2018ರ ವೇಳೆಗೆ 20 ಸಾವಿರ ರೂ.ಗಳಿಗೆ ಲೋಡ್ ಮರಳು ದೊರೆಯಲಿದೆ ಎಂದು ತಿಳಿಸಿದರು.
ಎಂಎಸ್‌ಐಎಲ್ ಈಗಾಗಲೇ ವಿದೇಶದಿಂದ ಮರಳು ಆಮದು ಮಾಡಿಕೊಳ್ಳಲು ಮುಂದಾಗಿದ್ದು, ಗುಣಮಟ್ಟದ ಪರಿಶೀಲನೆಯನ್ನೂ ನಡೆಸಿದೆ. ಮರಳು ಆಮದು ಸಂಬಂಧ ಸೂಕ್ತ ಕಾನೂನು ರೂಪಿಸಲಾಗುವುದು ಎಂದ ಅವರು, ರೈಲ್ವೆ ಸಂಪರ್ಕ ಇರುವ ಪ್ರದೇಶಗಳಲ್ಲಿ ಮರಳು ಶೇಖರಿಸಿ ಸಾರ್ವಜನಿಕರಿಗೆ ಒದಗಿಸಲಾಗುವುದು ಎಂದರು.
ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಹಾಡಿ ಸೇರಿದಂತೆ ಖಾಸಗಿ ಭೂಮಿಯಲ್ಲಿನ 10ರಿಂದ 15 ಸಾವಿರ ಜನ ವಸತಿಗಳಿಗೆ ಕಂದಾಯ ಗ್ರಾಮದ ಮಾನ್ಯತೆ ಕಲ್ಪಿಸುವ ‘ಭೂ ಕಂದಾಯ ತಿದ್ದುಪಡಿ ವಿಧೇಯಕ’ಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದು, ಅಧಿಸೂಚನೆ ಹೊರಡಿಸಲಾಗಿದೆ.
ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 1ವರ್ಷಗಳ ಕಾಲ ಇಂತಹ ಜಾಗಗಳಲ್ಲಿ ವಾಸವಿರುವವರಿಗೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗುವುದು. ಈ ಅವಧಿಯಲ್ಲಿ ಖಾಸಗಿ ಜಮೀನಿನಲ್ಲಿ ವಾಸಿಸುತ್ತಿರುವವರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸದರಿ ಅರ್ಜಿಗಳನ್ನು ಪರಿಶೀಲಿಸಿ, ಅರ್ಹರಿಗೆ ಮಾಲಕತ್ವ ನೀಡುವ ಬಗ್ಗೆ ಆದೇಶ ಹೊರಡಿಸುವ ಹೊಣೆಯನ್ನು ತಹಶೀಲ್ದಾರರಿಗೆ ವಹಿಸಲಾಗಿದೆ.
-ಟಿ.ಬಿ.ಜಯಚಂದ್ರ ಕಾನೂನು ಸಚಿವ







