ನ.10 ರಂದು ಟಿಪ್ಪು ಜಯಂತಿ ಆಚರಣೆ: ಜಿಲ್ಲಾಧಿಕಾರಿ ಡಿ.ರಂದೀಪ್
ಮೈಸೂರು, ಅ.30: ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನ.10 ರಂದು ಕಲಾಮಂದಿರದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ರಂದೀಪ್.ಡಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, ಟಿಪ್ಪು ಜಯಂತಿ ಒಂದು ಸಮುದಾಯಕ್ಕೆ ಸೀಮಿತವಾದ ಜಯಂತಿಯಲ್ಲ. ಎಲ್ಲ ವರ್ಗ ಹಾಗೂ ಸಮುದಾಯದವರ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಮಾತನಾಡಿ, ಕಳೆದ ವರ್ಷದಂತೆ ಈ ವರ್ಷವು ಪೊಲೀಸ್ ಇಲಾಖೆಯ ವತಿಯಿಂದ ಸೂಕ್ತವಾದ ಬಂದೂಬಸ್ತ್ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಜಯಂತಿಯ ಮುಖ್ಯ ಭಾಷಣಕ್ಕೆ ಹಲೋ ಮೈಸೂರು ಪತ್ರಿಕೆ ಸಂಪಾದಕ ಟಿ.ಗುರುರಾಜ್ , ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹಾಗೂ ತಲಕಾಡು ಚಿಕ್ಕರಂಗೇಗೌಡ ಅವರ ಹೆಸರನ್ನು ಶಿಫಾರಸು ಮಾಡಲಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೀತಿ ಮಂದರ್ ಕುಮಾರ್ ಅವರು ಕೋಮು ಸೌಹಾರ್ದ ಬೆಸೆಯುವ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಜಯಂತಿಯ ದಿನದಂದು ಗೌರವ ಸಮರ್ಪಣೆ ಮಾಡುವಂತೆ ಸಭೆಗೆ ಮನವಿ ಮಾಡಿದರು.
ಬಹುಜನ ವಿದ್ಯಾರ್ಥಿ ಸಂಘದ ಸೊಸಲೆ ಸಿದ್ದರಾಜು ಅವರು ಟಿಪ್ಪು ಸುಲ್ತಾನ್ ಅವರ ಕಾರ್ಯ ವೈಖರಿ, ಆಡಳಿತ, ಸಾಧನೆ ಕುರಿತ ಕಿರುಹೊತ್ತಿಗೆ ಮುದ್ರಿಸಿ ನೀಡಿದರೆ ಅವರ ಸಾಧನೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬಹುದು ಎಂದು ಸಭೆಗೆ ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಚೆನ್ನಪ್ಪ , ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಅಮ್ಜದ್‍ಖಾನ್, ಅಮೀನ್ ಸೇಠ್, ಕಲೀಂ, ವೇಣುಗೋಪಾಲ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.







