ಬೈಕಂಪಾಡಿ: ಅಭಿವೃದ್ಧಿಗೊಂಡ ರಸ್ತೆ ಉದ್ಘಾಟನೆ

ಮಂಗಳೂರು, ಅ.30: ಬೈಕಂಪಾಡಿ ಅಂಗರಗುಂಡಿ ಮುಖ್ಯರಸ್ತೆಯ ಹಾಗೂ ಫುಟ್‌ಪಾತ್ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಬಿ.ಎ. ಮೊಯ್ದಿನ್ ಬಾವಾ ನೆರವೇರಿಸಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 12 ಕೋ.ರೂ. ವೆಚ್ಚದಲ್ಲಿ ನಡೆಯುತ್ತಿರುವ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ ಮುಖ್ಯರಸ್ತೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಡಿಸೆಂಬರ್ ಅಂತ್ಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಕೈಗಾರಿಕಾ ಪ್ರದೇಶದ ಉದ್ಯಮಿಗಳ ಮತ್ತು ಕಾರ್ಮಿಕರಲ್ಲದೆ ಅಂಗರಗುಂಡಿ, ಕುಡುಂಬೂರು, ಜೋಕಟ್ಟೆ ಪ್ರದೇಶಗಳಿಗೆ ರಸ್ತೆ ಸಂಚಾರ ಸುಗಮವಾಗಲಿದೆ ಎಂದರು.
ಕ್ಷೇತ್ರದ ನಗರಪಾಲಿಕೆ ವ್ಯಾಪ್ತಿಯ ಬಹುತೇಕ ಮುಖ್ಯ ಹಾಗೂ ಒಳರಸ್ತೆಗಳು ಕಾಂಕ್ರಿಟೀಕರಣಗೊಂಡಿವೆ. ಜನವಸತಿ ಪ್ರದೇಶಗಳಲ್ಲಿ ಎಡಿಬಿ 2ನೆ ಹಂತದಲ್ಲಿ ಯುಜಿಡಿ ಕಾಮಗಾರಿ ನಡೆಯಲಿದೆ. ಬೈಕಂಪಾಡಿ ವಾರ್ಡಿನ ಅಂಗರಗುಂಡಿ, ಕುಡುಂಬೂರು, ಮೀನಕಳಿಯ, ಬೈಕಂಪಾಡಿ ಪೇಟೆ, ಚಿತ್ರಾಪುರ ಮತ್ತಿತರ ಪ್ರದೇಶಗಳಲ್ಲೂ ಯುಜಿಡಿ ಅನುಷ್ಠಾನವಾಗಲಿದೆ. ಎಡಿಬಿ ಅಧಿಕಾರಿಗಳು ಈಗಾಗಲೇ ಸರ್ವೇ ನಡೆಸಿ ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಶೀಘ್ರ ಇದರ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಮೊಯ್ದಿನ್ ಬಾವಾ ಹೇಳಿದರು.
ಕಾರ್ಪೊರೇಟರ್‌ಗಳಾದ ಪುರುಷೋತ್ತಮ ಚಿತ್ರಾಪುರ, ಕುಮಾರ್ ಮೆಂಡನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೇಶವ ಸನಿಲ್, ಬೈಕಂಪಾಡಿ ಜುಮಾ ಮಸೀದಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್, ಇಲ್ಯಾಸ್, ಬಾವಾಕ, ಹಾರೀಸ್ ಮತ್ತಿತರರು ಉಪಸ್ಥಿತರಿದ್ದರು.







