ತುಮಕೂರು ಒನ್ ಸೇವಾ ಕೇಂದ್ರಕ್ಕೆ ಚಾಲನೆ

ತುಮಕೂರು, ಅ.30: ನಗರದ ಚಿಕ್ಕಪೇಟೆಯ ದಿವಾನ್ ಪೂರ್ಣಯ್ಯ ಹಾಗೂ ಮಾರುತಿ ನಗರದ ಪ್ರಹ್ಲಾದ್ ರಾವ್ ಪಾರ್ಕಿನಲ್ಲಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ತುಮಕೂರು ಒನ್ ಸೇವಾ ಕೇಂದ್ರವನ್ನು ಇಂದು ಸಂಸದ ಎಸ್.ಪಿ.ಮುದ್ದ ಹನುಮೇಗೌಡ, ಶಾಸಕ ಡಾ.ರಫೀಕ್ ಅಹ್ಮದ್, ಮೇಯರ್ ರವಿಕುಮಾರ್ ಚಾಲನೆ ನೀಡಿದರು.
ವಿದ್ಯುತ್ ಬಿಲ್ ಪಾವತಿ, ಮನೆ, ನಲ್ಲಿ ಕಂದಾಯ ಪಾವತಿ ಸೇರಿದಂತೆ ಸುಮಾರು 18ಕ್ಕೂ ಹೆಚ್ಚು ಸರಕಾರಿ ಸೇವೆ ಮತ್ತು 8ಕ್ಕೂ ಹೆಚ್ಚು ಖಾಸಗಿ ಸೇವೆಗಳನ್ನು ಜನರಿಗೆ ಒದಗಿಸುವ ತುಮಕೂರು ಒನ್ ಸೇವಾ ಕೇಂದ್ರವನ್ನು ಅಕ್ಸಿಸ್ ಬ್ಯಾಂಕ್ ಪಾಲುದಾರಿಕೆಯಲ್ಲಿ ತೆರೆಯಲಾಗಿದ್ದು, ನಗರ ಪಾಲಿಕೆಯ ಸಂಪೂರ್ಣ ಉಸ್ತುವಾರಿಯಲ್ಲಿ ಈ ಸೇವಾ ಕೇಂದ್ರ ಕರ್ತವ್ಯ ನಿರ್ವಹಿಸಲಿದೆ.
ತುಮಕೂರು ಒನ್ ಸೇವಾ ಕೇಂದ್ರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ಆಯಾಯ ಬಡಾವಣೆಗಳಲ್ಲಿಯೇ ಒದಗಿಸುವ ಉದ್ದೇಶದಿಂದ ತುಮಕೂರ್ ಒನ್ ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ವಿದ್ಯುತ್ ಇಲಾಖೆ, ನೀರು ಸರಬರಾಜು ಬಿಲ್,ಆಸ್ತಿ ತೆರಿಗೆ,ಬಿ.ಎಸ್.ಎನ್.ಎಲ್ ಬಿಲ್, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ,ಸಾರಿಗೆ ಇಲಾಖೆ ಸೇರಿದಂತೆ 16ಕ್ಕೂ ಹೆಚ್ಚು ಸರಕಾರಿ ಇಲಾಖೆಗಳ ಸೇವೆಯನ್ನು ತುಮಕೂರು ಒನ್ ಒದಗಿಸಲಿದೆ. ಅಲ್ಲದೆ, ಖಾಸಗಿ ಕಂಪೆನಿಗಳಾದ ಎರ್‍ಟೆಲ್, ವೊಡಾಪೋನ್, ಐಡಿಯಾ ಸೇರಿದಂತೆ 8 ದೂರವಾಣಿ ಕಂಪೆನಿಗಳ ಸೇವೆಯನ್ನು ಈ ಕೇಂದ್ರ ಒದಗಿಸಲಿದೆ. ಎಂದರು.
ಶಾಸಕ ಡಾ.ರಫೀಕ್ ಅಹ್ಮದ್ ಮಾತನಾಡಿ, ತುಮಕೂರು ನಗರ ಸ್ಮಾರ್ಟ ಸಿಟಿಯಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಸೇವೆಗಳು ಜನರ ಮನೆ ಭಾಗಿಲಲ್ಲಿಯೇ ದೊರೆಯಲಿವೆ. ಹಾಲಿ ತುಮಕೂರು ನಗರದ ನಗರಪಾಲಿಕೆ ಆವರಣ, ಎಸ್.ಎಸ್.ಪುರಂ, ಶಿರಾಗೇಟ್ ಗಳಲ್ಲಿ ಇರುವ ತುಮಕೂರ್ ಒನ್ ಕೇಂದ್ರಗಳು ಈ ಸೇವೆ ಒದಗಿಸುತ್ತಿದ್ದು, ಇವುಗಳ ಜೊತೆಗೆ ಇಂದು ಮಾರುತಿ ನಗರದ ಮತ್ತು ಚಿಕ್ಕಪೇಟೆಯ ಪೂರ್ಣಯ್ಯನ ಚತ್ರದಲ್ಲಿ ತೆರೆದಿರುವ ಕೇಂದ್ರಗಳು ಈ ಭಾಗದ ಜನರಿಗೆ ಗುಣಮಟ್ಟದ ಸೇವೆ ಒದಗಿಸಲಿವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಈ ವೇಳೆ ಮೇಯರ್ ರವಿಕುಮಾರ್, ಉಪಮೇಯರ್ ಫರ್ಜಾನಾಖಾನಂ, ಆಯುಕ್ತ ಮಂಜುನಾಥಸ್ವಾಮಿ, ನಗರಸಭಾ ಸದಸ್ಯ ಎನ್.ಆರ್.ನಾಗರಾಜರಾವ್ ನಗರಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.







