ಏಷ್ಯಾಕಪ್: ಭಾರತದ ಮಹಿಳಾ ತಂಡಕ್ಕೆ ಸತತ ಜಯ

ಕಾಕಾಮಿಗಹರ(ಜಪಾನ್), ಅ.30: ಚೀನಾ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿದ ಭಾರತದ ಮಹಿಳಾ ತಂಡ ಏಷ್ಯಾಕಪ್ ಹಾಕಿ ಟೂರ್ನಮೆಂಟ್‌ನಲ್ಲಿ 4-1 ಅಂತರದಿಂದ ಜಯಭೇರಿ ಬಾರಿಸಿದೆ. ಈ ಮೂಲಕ ಸತತ ಎರಡನೆ ಜಯ ದಾಖಲಿಸಿದೆ.
ಇಲ್ಲಿನ ಕಾಕಾಮಿಗಹರ ಕವಾಸಕಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ‘ಎ’ ಗುಂಪಿನ 2ನೆ ಪಂದ್ಯದಲ್ಲಿ ಗುರ್ಜಿತ್ ಕೌರ್(19ನೆ ನಿಮಿಷ),ನವಜೋತ್ ಕೌರ್(32ನೆ ನಿಮಿಷ),ನೇಹಾ ಗೋಯಲ್(49ನೆ ನಿಮಿಷ) ಹಾಗೂ ನಾಯಕಿ ರಾಣಿ ರಾಂಪಾಲ್(58ನೆ ನಿಮಿಷ)ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಭಾರತ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಸಿಂಗಾಪುರದ ವಿರುದ್ಧ 10-0 ಗೋಲುಗಳ ಅಂತರದಿಂದ ಜಯ ಸಾಧಿಸಿದೆ.
ಭಾರತದ ಡ್ರಾಗ್‌ಫ್ಲಿಕ್ ಸ್ಪೆಷಲಿಸ್ಟ್ ಗುರ್ಜಿತ್ ಕೌರ್ 19ನೆ ನಿಮಿಷದಲ್ಲಿ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. 32ನೆ ನಿಮಿಷದಲ್ಲಿ ನವಜೋತ್ ಕೌರ್ ಫೀಲ್ಡ್ ಗೋಲು ಮೂಲಕ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. 38ನೆ ನಿಮಿಷದಲ್ಲಿ ಚೀನಾದ ಕ್ಯೂಕ್ಸಿಯಾ ಕ್ಯೂ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.
ನೇಹಾ ಗೋಯಲ್ 49ನೆ ನಿಮಿಷದಲ್ಲಿ ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 3-1ಕ್ಕೆ ಏರಿಸಿದರು. ನಾಯಕಿ ರಾಣಿ 58ನೆ ನಿಮಿಷದಲ್ಲಿ ಫೀಲ್ಡ್ ಗೋಲು ದಾಖಲಿಸಿ ಭಾರತಕ್ಕೆ 4-1 ಅಂತರದ ಭರ್ಜರಿ ಜಯ ತಂದುಕೊಟ್ಟರು. ಭಾರತ ಮಂಗಳವಾರ ನಡೆಯಲಿರುವ ತನ್ನ ಮೂರನೆ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಮಲೇಷ್ಯಾವನ್ನು ಎದುರಿಸಲಿದೆ.







