ಮನೋಜ್ ಕುಮಾರ್‌ಗೆ ಚಿನ್ನ
ನ್ಯಾಶನಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್

ವಿಶಾಖಪಟ್ಟಣ, ಅ.30: ನ್ಯಾಶನಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮನೋಜ್ ಕುಮಾರ್ ಸತತ ಎರಡನೆ ಚಿನ್ನದ ಪದಕ ಬಾಚಿಕೊಂಡರು. ಹಾಲಿ ಚಾಂಪಿಯನ್ ಶಿವ ಥಾಪ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ರೈಲ್ವೇಸ್ ಸ್ಪೋರ್ಟ್ಸ್ ಪ್ರಮೋಶನ್ ಬೋರ್ಡ್‌ನ್ನು ಪ್ರತಿನಿಧಿಸಿದ ಮನೋಜ್(69 ಕೆಜಿ) ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್‌ನ(ಎಸ್‌ಎಸ್‌ಸಿಬಿ) ದುಯೋಧನ್ ಸಿಂಗ್ ಅವರನ್ನು 4-1 ರಿಂದ ಮಣಿಸಿ ಚಿನ್ನ ಜಯಿಸಿದರು.
ಇನ್ನೋರ್ವ ಬಾಕ್ಸರ್ ಶಿವ ಥಾಪ ಎಸ್‌ಎಸ್‌ಸಿಬಿ ತಂಡದ ಮನೀಶ್ ಕೌಶಿಕ್ ವಿರುದ್ಧ 60 ಕೆಜಿ ತೂಕ ವಿಭಾಗದಲ್ಲಿ ಸೋಲುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಶಿವ ಟೂರ್ನಿಯಲ್ಲಿ ತಮ್ಮ ರಾಜ್ಯ ತಂಡ ಅಸ್ಸಾಂನ್ನು ಪ್ರತಿನಿಧಿಸಿದ್ದಾರೆ.
ಕಿಂಗ್ಸ್ ಕಪ್‌ನಲ್ಲಿ ಚಿನ್ನದ ಪದಕ ವಿಜೇತ ರೈಲ್ವೇಸ್‌ನ್ನು ಪ್ರತಿನಿಧಿಸುತ್ತಿರುವ ಶ್ಯಾಮ್ ಕುಮಾರ್(49 ಕೆಜಿ) ಮಿರೊರಾಂನ ಲಾಲ್‌ಬಿಯಾಕ್ಕಿಮ್‌ರನ್ನು ಫೈನಲ್ ಸುತ್ತಿನಲ್ಲಿ 3-2 ರಿಂದ ಸೋಲಿಸಿ ಚಿನ್ನ ಜಯಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮನ್‌ದೀಪ್ ಜಾಂಗ್ರಾ ರೈಲ್ವೇಸ್‌ನ ಪರ 75 ಕೆಜಿ ಮಿಡ್ಲ್‌ವೇಟ್ ತೂಕ ವಿಭಾಗದಲ್ಲಿ ಮೊತ್ತ ಮೊದಲ ಬಾರಿ ಚಿನ್ನದ ಪದಕ ಜಯಿಸಿದರು. ಪದಕದ ಸುತ್ತಿನಲ್ಲಿ ಮಿಜೋರಾಂನ ವನ್ಲಿಂಪುಯಾರನ್ನು 5-0 ಅಂತರದಿಂದ ಮಣಿಸಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಕಂಚು ವಿಜೇತ ಸತೀಶ್ ಎಸ್‌ಎಸ್‌ಸಿಬಿ ಪರ ಹರ್ಯಾಣದ ಪರ್ವಿನ್ ಕುಮಾರ್‌ರನ್ನು 5-0 ಅಂತರದಿಂದ ಮಣಿಸಿ ಸೂಪರ್ ವೇಟ್ +91 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದಾರೆ.
ಮತ್ತೊಂದು ಸ್ಪರ್ಧೆಯಲ್ಲಿ ಎಸ್‌ಎಸ್‌ಸಿಬಿಯ ಮದನ್ ಲಾಲ್ ಗೋವಾದ ಸಂತೋಷ್‌ರನ್ನು 3-2 ಅಂತರದಿಂದ ಸೋಲಿಸಿ ಬಾಟಮ್ ವೇಟ್(56ಕೆಜಿ) ಚಾಂಪಿಯನ್ ಆಗಿ ಹೊರಹೊಮ್ಮಿದರು. ಲೈಟ್ ವೆಲ್ಟರ್‌ವೇಟ್(64ಕೆಜಿ) ಪ್ರಶಸ್ತಿಯು ಎಸ್‌ಎಸ್‌ಸಿಬಿಯ ಧೀರಜ್ ರಂಗಿ ಪಾಲಾಯಿತು.
81 ಕೆಜಿ ತೂಕ ವಿಭಾಗದಲ್ಲಿ ದಿಲ್ಲಿಯ ಎದುರಾಳಿ ನೀಲ್ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಮನೀಷ್ ಪವಾರ್ ಚಿನ್ನ ಜಯಿಸಿದರು.
ಪ್ರಸ್ತುತ ಆವೃತ್ತಿಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹರ್ಯಾಣ ಕೇವಲ ಒಂದು ಚಿನ್ನ ಜಯಿಸಿದೆ. ಹೇವಿವೇಟ್(91ಕೆಜಿ) ವಿಭಾಗದಲ್ಲಿ ಹಿಮಾಚಲ ಪ್ರದೇಶದ ವರಿಂದರ್ ಕುಮಾರ್‌ರನ್ನು 5-0 ಅಂತರದಿಂದ ಮಣಿಸಿದ ನಮನ್ ಹರ್ಯಾಣಕ್ಕೆ ಚಿನ್ನಗೆದ್ದುಕೊಟ್ಟರು.







