ಜೋಹೊರ್ ಕಪ್: ಭಾರತಕ್ಕೆ ಕಂಚು
ಮಲೇಷ್ಯಾ ವಿರುದ್ಧ 4-0 ಅಂತರದ ಜಯ

ಕೌಲಾಲಂಪುರ, ಅ.30: ಆತಿಥೇಯ ಮಲೇಷ್ಯಾವನ್ನು 4-0 ಗೋಲುಗಳ ಅಂತರದಿಂದ ಸದೆಬಡಿದ ಭಾರತದ ಜೂನಿಯರ್ ಪುರುಷರ ತಂಡ ಏಳನೆ ಆವೃತ್ತಿಯ ಸುಲ್ತಾನ್ ಆಫ್ ಜೋಹೊರ್ ಕಪ್‌ನಲ್ಲಿ ಕಂಚು ಪದಕ ಗೆದ್ದುಕೊಂಡಿದೆ.
ರವಿವಾರ ಮೂರನೆ ಸ್ಥಾನಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ವಿಶಾಲ್ ಅಂಟಿಲ್ ಅವಳಿ ಗೋಲು(15ನೆ,25ನೆ ನಿಮಿಷ), ವಿವೇಕ್ ಪ್ರಸಾದ್(11ನೆ ನಿಮಿಷ) ಹಾಗೂ ಶೈಲಾನಂದ ಲಾಕ್ರಾ(21ನೆ ನಿಮಿಷ) ತಲಾ ಒಂದು ಗೋಲು ಬಾರಿಸಿ ಭಾರತಕ್ಕೆ ಕಂಚು ಗೆದ್ದುಕೊಟ್ಟಿದ್ದಾರೆ. ರೌಂಡ್ ರಾಬಿನ್ ಪಂದ್ಯಗಳಲ್ಲಿ ಮೂರರಲ್ಲಿ ಜಯ ಹಾಗೂ ಎರಡರಲ್ಲಿ ಸೋತಿರುವ ಭಾರತ ಒಟ್ಟು 9 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೂರನೆ ಸ್ಥಾನ ಪಡೆದಿತ್ತು. ಫೈನಲ್‌ಗೆ ಅರ್ಹತೆ ಪಡೆಯುವುದರಿಂದ ವಂಚಿತವಾಗಿದ್ದ ಭಾರತ ಮೂರನೆ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು. 11ನೆ ನಿಮಿಷದಲ್ಲಿ ಮಣಿಂದರ್ ಸಿಂಗ್ ನೆರವಿನಿಂದ ನಾಯಕ ವಿವೇಕ್ ಪ್ರಸಾದ್ ಭಾರತದ ಗೋಲಿನ ಖಾತೆ ತೆರೆದರು. ನಾಲ್ಕು ನಿಮಿಷದ ಬಳಿಕ ದಿಲ್‌ಪ್ರೀತ್ ಸಿಂಗ್ ನೀಡಿದ ಪಾಸ್‌ನ್ನು ಪಡೆದ ಶೈಲಾನಂದ ಚೆಂಡನ್ನು ವಿಶಾಲ್ ಆ್ಯಂಟಿಲ್‌ಗೆ ತಲುಪಿಸಿದರು. ಅದನ್ನು ಅವರು ಗೋಲು ಪೆಟ್ಟಿಗೆಗೆ ಸೇರಿಸಿದರು.
ಎರಡನೆ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರರು ಪ್ರಾಬಲ್ಯ ಮೆರೆದರು. 21ನೆ ನಿಮಿಷದಲ್ಲಿ ನಾಯಕ ವಿವೇಕ್ ಪ್ರಸಾದ್ ನೀಡಿದ ಪಾಸ್‌ನ ನೆರವಿನಿಂದ ಶೈಲಾನಂದ ಲಾಕ್ರಾ ಗೋಲು ಬಾರಿಸಿ ಭಾರತಕ್ಕೆ 3-0 ಮುನ್ನಡೆ ಒದಗಿಸಿಕೊಟ್ಟರು.
ಮಲೇಷ್ಯಾದ ಮೇಲೆ ಸವಾರಿ ಮುಂದುವರಿಸಿದ ಭಾರತ 25ನೆ ನಿಮಿಷದಲ್ಲಿ ನಾಲ್ಕನೆ ಗೋಲು ಬಾರಿಸಿತು. ವಿಶಾಲ್ ಆ್ಯಂಟಿಲ್ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದರು.
ಮಲೇಷ್ಯಾ ಕೊನೆಯ ಎರಡು ಕ್ವಾರ್ಟರ್‌ನಲ್ಲಿ ತಿರುಗೇಟು ನೀಡಲು ಯತ್ನಿಸಿತು. ಆದರೆ, ಭಾರತದ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ.







