ಕಾವೇರಿ ತಾಲೂಕಿಗೆ ಆಗ್ರಹಿಸಿ ಕುಶಾಲನಗರದಲ್ಲಿ ಬೃಹತ್ ರ್ಯಾಲಿ
ಮಡಿಕೇರಿ, ಅ.30: ರಾಜ್ಯದಲ್ಲಿ ನೂತನವಾಗಿ ರಚನೆ ಗೊಳ್ಳಲಿರುವ 50 ತಾಲೂಕುಗಳ ಜತೆಗೆ 51ನೆ ತಾಲೂಕಾಗಿ ಪ್ರಸ್ತಾವಿತ ಕಾವೇರಿ ತಾಲೂಕನ್ನು ಅನುಷ್ಠಾನ ಗೊಳಿಸುವಂತೆ ಕುಶಾಲನಗರದಲ್ಲಿ ಬೃಹತ್ ರ್ಯಾಲಿಯಲ್ಲಿ 2ಹೋಬಳಿಗಳ ಜನರು ಹಕ್ಕೊತ್ತಾಯ ನಿರ್ಣಯ ಕೈಗೊಂಡಿದ್ದಾರೆ.
ಕುಶಾಲನಗರದ ಮಡಿಕೇರಿ ರಸ್ತೆಯ ತಾವರೆಕೆರೆ ಬಳಿಯಿಂದ ಹೊರಟ ಹೋರಾಟ ಸಮಿತಿಯ ಕೇಂದ್ರ ಮತ್ತು ಸ್ಥಾನೀಯ ಸಮಿತಿಗಳ ಪ್ರಮುಖರು ಮೆರವಣಿಗೆ ಮೂಲಕ ತೆರಳಿ ಒಗ್ಗಟ್ಟನ್ನು ಪ್ರದರ್ಶಿಸಿದರು. ತಮ್ಮ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಕುಶಾಲನಗರದಲ್ಲಿ ವಿವಿಧ ಸಂಘಟನೆಗಳು ನಿರಂತರ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದರೊಂದಿಗೆ 2 ಹೋಬಳಿಯ ಗ್ರಾಮಗಳಲ್ಲಿ ಸ್ಥಾನೀಯ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿದ್ದವು.
ನಡುವೆ ಹೋರಾಟ ಸಮಿತಿಯ ಪ್ರಮುಖರು ಸಿಎಂ, ಸರಕಾರದ ಸಚಿವರನ್ನು ಭೇಟಿ ಮಾಡಿ ತಾಲೂಕು ರಚನೆ ಪಟ್ಟಿಗೆ ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ಕಾವೇರಿ ತಾಲೂಕು ರಚನೆ ಮಾಡು ವಂತೆ ಮನವಿ ಸಲ್ಲಿಸಲಾಗಿತ್ತು. ಇದೀಗ ಬೃಹತ್ ರ್ಯಾಲಿ ನಡೆಸುವುದರೊಂದಿಗೆ ಸರಕಾರದ ಗಮನ ಸೆಳೆಯಲು ಪ್ರಯತ್ನ ನಡೆದಿದೆ.
ರ್ಯಾಲಿಯಲ್ಲಿ ಹೋರಾಟ ಸಮಿತಿಯ ಕೇಂದ್ರ ಸಮಿತಿ ನೇತೃತ್ವದಲ್ಲಿ 19 ಸ್ಥಾನೀಯ ಸಮಿತಿಗಳ ಪ್ರಮುಖರು, ನೆರೆಯ ಮುಳ್ಳುಸೋಗೆ, ಹೆಬ್ಬಾಲೆ, ಕೂಡಿಗೆ, ನೆಲ್ಲಿಹುದಿಕೇರಿ, ಸುಂಟಿಕೊಪ್ಪ, ವಾಲ್ನೂರು-ತ್ಯಾಗತ್ತೂರು, ಕಂಬಿಬಾಣೆ, ಕೊಡಗರಹಳ್ಳಿ, 7ನೇ ಹೊಸಕೋಟೆ, ಗುಡ್ಡೆಹೊಸೂರು, ಅಲ್ಲದೆ ವಿವಿಧ ಸಂಘಟನೆಗಳು, ಕಾಲೇಜು ವಿದ್ಯಾರ್ಥಿಗಳು ತಾಲೂಕು ರಚನೆಯ ಬಗ್ಗೆ ಘೋಷಣೆ ಮೊಳಗಿಸಿದರು.
ರ್ಯಾಲಿಯಲ್ಲಿ ಹೋರಾಟ ಸಮಿತಿಯ ಸಂಚಾಲಕ ವಿ.ಪಿ.ಶಶಿಧರ್, ಶಾಸಕ ಅಪ್ಪಚ್ಚುರಂಜನ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಕೆ.ನಾಗೇಂದ್ರ ಬಾಬು, ಅಬ್ದುಲ್ ಖಾದರ್, ಜಿ.ಎಲ್.ನಾಗರಾಜ್ ಇತರರಿದ್ದರು.
ಕುಶಾಲನಗರ ಪಟ್ಟಣದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ವ್ಯಾಪಾರಗಾರರು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ರ್ಯಾಲಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಕುಶಾಲನಗರ ಡಿವೈಎಸ್ಪಿ ಸಂಪತ್‌ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.







