ನ.1ರಿಂದ 30ರವರೆಗೆ ಜಿಲ್ಲೆಯಲ್ಲಿ ಸಿರಿಗನ್ನಡದ ನುಡಿನಿತ್ಯೋತ್ಸವ: ಶ್ರೀನಿವಾಸ್
ಚಿಕ್ಕಮಗಳೂರು, ಅ.30: ಜಿಲ್ಲಾ ಸಿರಿಗನ್ನಡ ವೇದಿಕೆಯು ತಾಲೂಕು, ಹೋಬಳಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಸಿರಿಗನ್ನಡ ವೇದಿಕೆಯಿಂದ ನೂತನವಾದ ಕಾರ್ಯಯೋಜನೆ ರೂಪಿಸಿದ್ದು, ನ.1ರಿಂದ 30ರವರೆಗೆ ಜಿಲ್ಲೆಯಲ್ಲಿ ನಿತ್ಯವೂ ಕನ್ನಡ ಉತ್ಸವ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ನ.1ರಿಂದ 30ರವರೆಗೆ ಜಿಲ್ಲೆಯಲ್ಲಿ ನಿತ್ಯವೂ ಕನ್ನಡ ಉತ್ಸವ ಏರ್ಪಡಿಸಲಾಗಿದ್ದು ನ.1ರ ಬೆಳಗ್ಗೆ 7:30 ಕ್ಕೆ ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಇದೇ ದಿನ ಸಂಜೆ 7 ಘಂಟೆಗೆ ಕಡೂರಿನ ಸಂಗೀತ ಶಾಲಾ ಶಿಕ್ಷಕ ಪ್ರಸನ್ನ ಅವರ ಮನೆ ಅಂಗಳದಲ್ಲಿ ನುಡಿನಿತ್ಯೋತ್ಸವಕ್ಕೆ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಚ್.ಎಂ.ಲೋಕೇಶ್ ಚಾಲನೆ ನೀಡಲಿದ್ದಾರೆ.
ಪ್ರಾಸ್ತಾವಿಕವಾಗಿ ಜಿಲ್ಲಾ ಸಿರಿಗನ್ನಡ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ. ಪ್ರಕಾಶ್ ಮಾತನಾಡ ಲಿದ್ದಾರೆ. ಹಾಗೂ ಕಡೂರು ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಭಾಗ್ಯಾ ಆಶಯ ಭಾಷಣ ಮಾಡುವರು. ಕಡೂರು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕುಪ್ಪಾಳು ಶಾಂತಮೂರ್ತಿ ಸಾಹಿತ್ಯ ಮತ್ತು ಸಂಸ್ಕೃತಿ ವಿಚಾರ ಕುರಿತು ಉಪನ್ಯಾಸ ನೀಡಲಿದ್ದಾರೆ.
ನ.14 ರ ಸಂಜೆ 7ಕ್ಕೆ ಕಡೂರಿನ ಪೊಲೀಸ್ ತರಬೇತಿ ಶಾಲಾ ಆವರಣದಲ್ಲಿ ನಡೆಯುವ ನುಡಿನಿತ್ಯೋತ್ಸವ ಕಾರ್ಯಕ್ರಮದಲ್ಲಿ ಪೋಲೀಸ್ ತರಬೇತಿ ಶಾಲಾ ಪ್ರಾಂಶುಪಾಲ ಡಾ. ಚನ್ನಯ್ಯ ಅಧ್ಯಕ್ಷತೆ ವಹಿಸಲಿದ್ದು ಚಿಕ್ಕಮಗಳೂರಿನ ಖ್ಯಾತ ವೈದ್ಯ ಜೆ.ಪಿ. ಕೃಷ್ಣೇಗೌಡ, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್, ಡಿ.ಎಚ್.ನಟರಾಜ್, ಮತ್ತು ದೀಪಕ್ ದೊಡ್ಡಯ್ಯ, ಸೀಗೆಹಡ್ಳು ಹರೀಶ್, ಜಿಲ್ಲಾ ಸಿರಿಗನ್ನಡ ವೇದಿಕೆಯ ಪ್ರಧಾನ ಕಾರ್ಯದರ್ಶಿ ಜೆ.ಈ.ಸೋಮಶೇಖರ್ ಭಾಗವಹಿಸಲಿದ್ದಾರೆ.
ಜಿಲ್ಲೆಯ ವಿವಿಧೆಡೆ ನಡೆಯುವ ನಿತ್ಯೋತ್ಸವದಲ್ಲಿ ಮಂಕುತಿಮ್ಮನಕಗ್ಗ, ಕನ್ನಡ-ಕನ್ನಡಿಗ, ಭಾಷೆಹುಟ್ಟು ಬೆಳವಣಿಗೆ, ದಾಸಸಾಹಿತ್ಯ, ಜಿಲ್ಲೆಯ ಸಾಹಿತಿಗಳ ಪರಿಚಯ, ಕವಿ ಲಕ್ಷ್ಮೀಶ ಯುವ ಜಾಗೃತಿ, ಜೀವನ ವೌಲ್ಯಗಳು, ನಡೆ-ನುಡಿ ಶುದ್ಧಿ, ಕುಮಾರವ್ಯಾಸಭಾರತ, ರಾಷ್ಟ್ರಕವಿಗಳು, ಅಲ್ಲಮಪ್ರಭು ಬಸವಣ್ಣ, ಕನಕದಾಸರು ಹೀಗೆ ಹತ್ತು ಹಲವು ವಿಷಯ ಕುರಿತು ಜಿಲ್ಲೆಯ ಸಾಹಿತಿಗಳು, ಚಿಂತಕರು ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.







