ಅತ್ಯಾಚಾರ ಆರೋಪಿಗೆ ಕಠಿಣ ಸಜೆ
ಚಿಕ್ಕಮಗಳೂರು, ಅ.30: ಹದಿನಾರು ವರ್ಷದ ಬಾಲಕಿಯೋರ್ವಳನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ 10 ವರ್ಷಗಳ ಕಠಿಣ ಸಜೆ ಹಾಗೂ 70 ಸಾವಿರ ರೂ.ದಂಡ ವಿಧಿಸಿ ಚಿಕ್ಕಮಗಳೂರಿನ 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.
2015ರಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಕಾಫಿ ತೋಟದಲ್ಲಿ 11 ದಿನಗಳ ಕಾಲ ಬಾಲಕಿಯ ಮೇಲೆ ಈಶ್ವರ್ ನಾಯಕ ಎಂಬಾತ ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಮೂಲತಃ ಸಕಲೇಶಪುರ ತಾಲೂಕು ಹಾನುಬಾಳು ಬಳಿ ಬಾಲಕಿಯು ತನ್ನ ಮನೆ ಮಂದಿಯೊಂದಿಗೆ ಕಳಸ ಬಳಿಯ ಕಾಫಿ ತೋಟವೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ.
ಬಾಲಕಿಯ ತಂದೆ, ತಾಯಿ ಕಾಫಿ ತೋಟದಲ್ಲಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿದ್ದರು. ಈ ಸಮಯದಲ್ಲಿ ಸಮಯ ಸಾಧಿಸಿಕೊಂಡ ಆರೋಪಿ ಈಶ್ವರ ನಾಯ್ಕ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಎಂದು ಕಳಸ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕಮಗಳೂರಿನ 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಕೋರ್ಟ್ ನ್ಯಾಯಾಧೀಶ ಡಿ. ಕಂಬೇಗೌಡ, ಈಶ್ವರ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 10 ವರ್ಷ ಕಠಿಣ ಸಜೆ ಮತ್ತು 70 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.







