ಏಕದಿನ ಕ್ರಿಕೆಟ್: ಮತ್ತೆ ನಂ.1 ಸ್ಥಾನಕ್ಕೇರಿದ ಕೊಹ್ಲಿ

ದುಬೈ, ಅ.30: ನ್ಯೂಝಿಲೆಂಡ್ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾರೆ.
10 ದಿನಗಳ ಹಿಂದೆ ನಂ.1 ಸ್ಥಾನವನ್ನು ದಕ್ಷಿಣ ಆಫ್ರಿಕದ ಎಬಿಡಿ ವಿಲಿಯರ್ಸ್‌ಗೆ ಒಪ್ಪಿಸಿದ್ದ ಕೊಹ್ಲಿ ಇದೀಗ ಎಬಿಡಿ ಕೈಯಿಂದ ಈ ಸ್ಥಾನವನ್ನು ಕಿತ್ತುಕೊಂಡಿದ್ದಾರೆ. ನ್ಯೂಝಿಲೆಂಡ್ ವಿರುದ್ಧ ಭಾರತ ರವಿವಾರ ಮೂರನೆ ಪಂದ್ಯದಲ್ಲಿ 6 ರನ್‌ಗಳ ರೋಚಕ ಜಯ ಗಳಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತ್ತು.
28ರ ಹರೆಯದ ಕೊಹ್ಲಿ ಸರಣಿಯಲ್ಲಿ 263 ರನ್ ಕಲೆ ಹಾಕುವ ಮೂಲಕ 889 ಪಾಯಿಂಟ್ಸ್ ಗಳಿಸಿದ್ದರು. ಇದು ಈ ತನಕ ಭಾರತದ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ಸಾಧನೆ. 1998ರಲ್ಲಿ ಸಚಿನ್ ತೆಂಡುಲ್ಕರ್ 887 ಪಾಯಿಂಟ್ಸ್ ಗಳಿಸಿದ್ದರು. ಉಪನಾಯಕ ಹಾಗೂ ಆರಂಭಿಕ ದಾಂಡಿಗ ರೋಹಿತ್ ಶರ್ಮ 174 ರನ್ ಗಳಿಸುವ ಮೂಲಕ ಜೀವನಶ್ರೇಷ್ಠ 799 ಅಂಕ ಪಡೆದು 7ನೆ ಸ್ಥಾನಕ್ಕೆ ಏರಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 11ನೆ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ಪೈಕಿ ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ 6 ವಿಕೆಟ್ ಪಡೆದು ಜೀವನ ಶ್ರೇಷ್ಠ 3ನೆ ಸ್ಥಾನ ತಲುಪಿದ್ದಾರೆ.







