ಕುಡಿಯುವ ನೀರಿನ ಕೊರತೆ ನೀಗಿಸಲು ದಸಂಸ ಮನವಿ
ಚಿಕ್ಕಮಗಳೂರು, ಅ.30: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕುಡಿಯುವ ನೀರು ಸಹಿತ ವಿವಿಧ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಝಾದ್ ಪಾರ್ಕ್‌ನಲ್ಲಿ ಸೋಮವಾರ ಧರಣಿ ನಡೆಸಿ ಜಿಲ್ಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕೊಪ್ಪ, ಎನ್.ಆರ್.ಪುರ, ಅಜ್ಜಂಪುರ, ಮೂಡಿಗೆರೆ, ಚಿಕ್ಕಮಗಳೂರು, ಶೃಂಗೇರಿ, ಕಡೂರು ಭಾಗದಲ್ಲಿ ಕುಡಿಯುವ ನೀರಿನ ಹಾಹಾಕಾರ, ನಿವೇಶನದ ಸಮಸ್ಯೆ, ಸ್ಮಶಾನ ಭೂಮಿ, ದಲಿತರ ಭೂಮಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ ದಲಿತರಿಗೆ ಮರಳಿ ಕೊಡಬೇಕು ಎಂದು ಒತ್ತಾಯಿಸಿದರು.
ಫಾರಂ ನ.53ರಲ್ಲಿ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಣೆ ವಿಳಂಬವನ್ನು ತಡೆದು ತಕ್ಷಣ ಹಕ್ಕುಪತ್ರ ವಿತರಣೆ ನಡೆಸಬೇಕು. ಆರೋಗ್ಯ ಇಲಾಖೆಯಲ್ಲಿ ದಲಿತರಿಗೆ ಸರಿಯಾಗಿ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ಎನ್.ಆರ್.ಪುರ ತಾಲೂಕಿನ ಆರೋಗ್ಯ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆಸ್ಪತ್ರೆಗೆ ತೆರಳಿದವರಿಗೆ ಸರಿಯಾಗಿ ಚಿಕಿತ್ಸೆ ಕೊಡದ ಮೂಡಿಗೆರೆ ಮತ್ತು ಕಳಸ ಆಸ್ಪತ್ರೆ ವೈದ್ಯರನ್ನು ಅಮಾನತುಪಡಿಸಬೇಕು. ಕಳಸ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ನೇಮಿಸಬೇಕು. ಆರೋಗ್ಯ ಇಲಾಖೆಯವರು ಔಷಧಿ ಮತ್ತು ಚುಚ್ಚುಮದ್ದುಗಳನ್ನು ಮಾರಿಕೊಳ್ಳುತ್ತಿರುವ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶೃಂಗೇರಿ ತಾಲೂಕಿನಲ್ಲಿ ಸರಕಾರಿ ಭೂಮಿಯಲ್ಲಿ ದಲಿತರಿಗೆ ನಿವೇಶನ ನೀಡಬೇಕು. ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬೇಕು. ವಸ್ತಾರೆ ಹೋಬಳಿಯ ಕೆಳಗಣಿ ಬಳಿಯ ತಡಗಸೆ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ನಡೆದಾಡುವ ದಾರಿಯನ್ನು ಮೇಲ್ವ ರ್ಗದ ಜನರು ಮುಚ್ಚಿರುವುದನ್ನು ತೆರವುಗೊಳಿಸಿಕೊಡಬೇಕು ಎಂದು ಧರಣಿನಿರತರು ಆಗ್ರಹಿಸಿದ್ದಾರೆ.
ಧರಣಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಕೆ.ಪಿ.ರಾಜರತ್ನಂ, ಮಹಿಳಾ ಸಂಚಾಲಕಿ ಗೀತಾ ಪುಟ್ಟಪ್ಪ, ಬಾಲಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.







