ರೋಜರ್ ಫೆಡರರ್ ಚಾಂಪಿಯನ್
ಬಾಸೆಲ್ ಓಪನ್ ಟೆನಿಸ್ ಟೂರ್ನಿ
ಬಾಸೆಲ್, ಅ.30: ಬಾಸೆಲ್ ಓಪನ್ ಟೆನಿಸ್ ಟೂರ್ನಮೆಂಟ್ನಲ್ಲಿ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಫೆಡರರ್ ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು 6-7(5/7), 6-4, 6-3 ಸೆಟ್ಗಳ ಅಂತರದಿಂದ ಮಣಿಸಿದ್ದಾರೆ. ಈ ಮೂಲಕ ಎಂಟನೆ ಬಾರಿ ಬಾಸೆಲ್ ಓಪನ್ ಟ್ರೋಫಿ ಜಯಿಸಿದ್ದಾರೆ.
2012 ಹಾಗೂ 2013ರಲ್ಲಿ ಡೆಲ್ಪೊಟ್ರೊ ವಿರುದ್ಧ ಬಾಸೆಲ್ ಫೈನಲ್ನಲ್ಲಿ ಸೋತಿದ್ದ ಫೆಡರರ್ ಈ ಬಾರಿ ಗೆಲುವು ಸಾಧಿಸಲು ಯಶಸ್ವಿಯಾಗಿದ್ದು, ಈ ಋತುವಿನಲ್ಲಿ ಏಳು ಎಟಿಪಿ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಫೆಡರರ್ ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಪ್ರಶಸ್ತಿಗಳನ್ನು ಜಯಿಸಿದ್ದರು.
ವೃತ್ತಿಜೀವನದಲ್ಲಿ 95ನೆ ಪ್ರಶಸ್ತಿಯನ್ನು ಜಯಿಸಿದ ಫೆಡರರ್ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ಜಿಮ್ಮಿ ಕೊನರ್ಸ್ ಒಟ್ಟು 109 ಪ್ರಶಸ್ತಿಯನ್ನು ಜಯಿಸಿದ್ದರು.
ಫೆಡರರ್ ಮುಂದಿನ ವಾರ ಆರಂಭವಾಗಲಿರುವ ಪ್ಯಾರಿಸ್ ಮಾಸ್ಟರ್ಸ್ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಲಂಡನ್ನಲ್ಲಿ ನಡೆಯಲಿರುವ ವರ್ಲ್ಡ್ ಟೂರ್ ಫೈನಲ್ಸ್ ಹಾಗೂ 2018ರ ಋತುವಿಗೆ ಸಂಪೂರ್ಣ ಫಿಟ್ ಆಗಿರಲು ವಿಶ್ರಾಂತಿ ಪಡೆಯಲು ಬಯಸಿದ್ದಾರೆ.