ರಾಜ್ಯದ ಮೊದಲ ಮಹಿಳಾ ಡಿಜಿ –ಐಜಿಪಿ ನೀಲಮಣಿ ಅಧಿಕಾರ ಸ್ವೀಕಾರ

ಬೆಂಗಳೂರು, ಅ.31: ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿಯಾಗಿ ನೀಲಮಣಿ ಎನ್.ರಾಜು ನೇಮಕಗೊಂಡಿದ್ದು, ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಇಲ್ಲಿನ ನೃಪತುಂಗ ರಸ್ತೆಯ ಪೊಲೀಸ್ ಮಹಾ ನಿರ್ದೇಶಕ ಪ್ರಧಾನ ಕಚೇರಿಯಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ನಿರ್ಗಮಿತ ಡಿಜಿಪಿ ಆರ್.ಕೆ.ದತ್ತ ಅವರು ಪೊಲೀಸ್ ಬೇಟನ್ ನೀಡುವ ಮೂಲಕ ನೀಲಮಣಿ ಎನ್.ರಾಜು ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಆ ನಂತರ ಪೊಲೀಸ್ ಹಾಗೂ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ನೂತನ ಡಿಜಿಪಿ ನೀಲಮಣಿ ಎನ್.ರಾಜು, ಮುಂದಿನ ವರ್ಷ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಇದೆ. ಈ ದೃಷ್ಟಿಯಿಂದ ನನ್ನನು ಆಯ್ಕೆ ಮಾಡಿದ್ದಕ್ಕೆ, ನಾನು ಕೆಲಸ ಮಾಡಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ. ಈ ಸವಾಲು ನಾನು ಸ್ವೀಕರಿಸಿದ್ದು, ಎಲ್ಲರ ಸಹಾಯದೊಂದಿಗೆ ಎದುರಿಸಲಾಗುವುದೆಂದು ನುಡಿದರು.
ಸಹಾಯ ಬೇಕು: ಪೊಲೀಸ್ ಪೇದೆಗಳು ಇಲಾಖೆಯ ಕಣ್ಣು-ಕಿವಿಗಳು ಇದ್ದಂತೆ, ಅವರ ಕೊಡುಗೆ ಅಪಾರವಾಗಿದೆ. ಎಲ್ಲ ಗ್ರೇಡ್‌ನ ಅಧಿಕಾರಿಗಳ ಸಹಕಾರ ಬಯಸುತ್ತೇನೆ. ಇಲಾಖೆಯಲ್ಲಿ ಹೊಸ ಬೀಟ್ ಪದ್ದತಿ ಮುಂದುವರೆಸಿಕೊಂಡು ಹೋಗುತ್ತೇನೆ. ಆರ್.ಕೆ.ದತ್ತಾ ಅವರ ಹೊಸ ಕಾರ್ಯಕ್ರಮಗಳನ್ನು ಮುಂದು ವರೆಸಲಾಗುವುದು ಎಂದ ಹೇಳಿದರು.
ಅಭಿನಂದನೆ: ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಇದೇ ವೇಳೆ ನೀಲಮಣಿ ಎನ್.ರಾಜು ಅವರು ಅಭಿನಂದನೆ ಸಲ್ಲಿಸಿದರು.
ನಿರ್ಗಮಿತ ಪೊಲೀಸ್ ಮಹಾನಿದೇಶಕ ಆರ್.ಕೆ.ದತ್ತ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನನ್ನ ನಿವೃತ್ತಿಗೆ ಇನ್ನು 9 ತಿಂಗಳಕಾಲ ಮಾತ್ರ ಡಿಜಿಪಿಯಾಗಿ ನಾನು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿ ಬಂದದ್ದು ನನ್ನ ಪುಣ್ಯ. ಅಧಿಕಾರ ಬೇಕು ಎಂದು ನಾನು ಕೇಳಿದವನಲ್ಲ, ಆದರೂ ನನಗೆ ರಾಜ್ಯ ಸರಕಾರ ಈ ಜವಾಬ್ದಾರಿಯನ್ನು ವಹಿಸಿತು ಎಂದು ನೆನಪು ಮಾಡಿಕೊಂಡರು.
ಕರ್ನಾಟಕ ಪೊಲೀಸ್ ಇಲಾಖೆಗೆ ಇದು ಐತಿಹಾಸಿಕ ದಿನವಾಗಿದ್ದು, ಮೊದಲ ಮಹಿಳಾ ಡಿಜಿ-ಐಜಿಪಿ ಆಗಿ ನೀಲಮಣಿ ಎನ್.ರಾಜು ಅಧಿಕಾರ ಸ್ವೀಕರಿಸಿದ್ದಾರೆ. ನೀಲಮಣಿ ರಾಜು ಅವರಿಗೆ ನಾನು ಅಭಿನಂದಿಸುತ್ತೇನೆ. ನನ್ನ ಅಧಿಕಾರ ಅವಧಿಯಲ್ಲಿ ನನ್ನ ಕೈಲಾದ ಒಳ್ಳೆಯ ಕೆಲಸ ಮಾಡಿದ್ದೇನೆ. ನ್ಯೂ ಬೀಟ್ ಸಿಸ್ಟಂ, ಡಯಲ್ 100 ಸೇರಿದಂತೆ ಹಲವು ಯೋಜನೆ ಜಾರಿ ಮಾಡಲಾಗಿದೆ. ರಾಜ್ಯದ ಎಲ್ಲ ಅಧಿಕಾರಿಗಳು ನನಗೆ ಸಹಕರಿಸಿದ್ದಾರೆ ಎಂದು ದತ್ತ ಹೇಳಿದರು.
ನೀಲಮಣಿ ಎನ್.ರಾಜು ಅವರು ಇಲಾಖೆಯನ್ನು ಇನ್ನಷ್ಟು ಉನ್ನತ ದರ್ಜೆಗೆ ಕೊಂಡೊಯ್ಯಲಿದ್ದಾರೆ. ಇನ್ನು ಡಿಜಿಪಿ ಆಗಿ ಬಡ್ತಿ ಹೊಂದಿರುವ ಪ್ರವೀಣ್ ಸೂದ್ ಅವರಿಗೂ ಅಭಿನಂದನೆ ಸಲ್ಲಿಸಿದರು.
ಪ್ರಪ್ರಥಮ ಮಹಿಳಾ ಡಿಜಿಪಿಯ ಹಿನ್ನಲೆ: ಉತ್ತರ ಪ್ರದೇಶದ ರೂರ್ಕಿ ಮೂಲದ ನೀಲಮಣಿ ಎನ್.ರಾಜು ಅವರು 1960 ಜನವರಿ 17ರಂದು ಜನಿಸಿದವರು.
ರಾಜ್ಯ ಮತ್ತು ಕೇಂದ್ರ ಸರಕಾರಗಳಡಿಯಲ್ಲಿ 33 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ನೀಲಮಣಿ ಎನ್.ರಾಜು ಅವರು ಮೊದಲ ಬಾರಿಗೆ ಚಿಂತಾಮಣಿ ಜಿಲ್ಲೆಯಲ್ಲಿ ತಮ್ಮ ಕರ್ತವ್ಯವನ್ನು ಆರಂಭಿಸಿದರು. ಕೆಜಿಎಫ್ ಮತ್ತು ಕೋಲಾರ ಎಸ್ಪಿ, ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಜಂಟಿ ನಿರ್ದೇಶಕಿ ಸೇರಿದಂತೆ ನಾನಾ ಹುದ್ದೆಳಲ್ಲಿ 20 ವರ್ಷ ಸೇವೆಸಲ್ಲಿಸಿದ್ದಾರೆ.
ನೀಲಮಣಿ ಅವರ ಪತಿ ಎನ್.ನರಸಿಂಹರಾಜು ಸಿಎಂ ಸಿದ್ದರಾಮಯ್ಯಅವರ ಬಳಿ ಮೂರು ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನೀಲಮಣಿ ರಾಜು ಅವರು ಹಾಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅದಕ್ಕೂ ಮೊದಲು ರಾಜ್ಯ ಗುಪ್ತಚರ ವಿಭಾಗದ ಡಿಜಿಪಿ ಆಗಿಯೂ ಕೆಲಸ ಮಾಡಿರುವ ಆನುಭವ ಅವರಿಗಿದೆ.
1983ರ ಐಪಿಎಸ್ ಬ್ಯಾಚ್‌ನ ಅಧಿಕಾರಿಯಾಗಿದ್ದು, ಎಂಎ, ಎಂಬಿಎ, ಎಂ.ಫಿಲ್ ಪದವೀಧರೆ. ಇವರ ಸೇವಾವಧಿಯು 2020ರ ಜನವರಿ ತಿಂಗಳವರೆಗೆ ಇರಲಿದೆ ಎಂದು ಪ್ರಕಟನೆ ತಿಳಿಸಿದೆ.







