ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ತಂತ್ರಜ್ಞಾನ ಆವಿಷ್ಕಾರ: ಡಾ.ರಾಮಕೃಷ್ಣ
ಬೆಂಗಳೂರು, ಅ.31: ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗಾಂಗಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯ ಡಾ.ರಾಮಕೃಷ್ಣ ಎಂಬವರು ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದ್ದಾರೆ.
ಮೃತ ದೇಹಗಳನ್ನು ಸಂರಕ್ಷಣೆ ಮಾಡಲು ಅನುಕೂಲವಾಗುವಂತೆ ನಗರದ ಮೊದಲ ಬಾರಿಗೆ ಹೊಸ ತಂತ್ರಜ್ಞಾನವನ್ನು ಆವಿಷ್ಕಾರಗೊಳಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ.ಜಯಂತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಪ್ತಗಿರಿ ಆಸ್ಪತ್ರೆಯ ವಿಜ್ಞಾನಿ, ನಿವೃತ್ತ ವ್ಯೆದ್ಯ ಡಾ.ರಾಮಕೃಷ್ಣ ಸುಮಾರು 20 ವರ್ಷದ ಸತತ ಪರಿಶ್ರಮದಿಂದ ಪ್ಲಾಸ್ಟಿಕ್ ಟೀ ಕಪ್ ಮತ್ತು ಥರ್ಮೋಕೋಲ್ ಮೂಲಕ ಪ್ಲಾಸ್ಟಿನೇಷನ್ (ಫಾರ್ಮಾಲಿನ್ ಇಲ್ಲದ ರೆಸಿನ್) ಎಂಬ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. ಇದು ಸತ್ತ ಮನುಷ್ಯರ ಅಂಗಾಂಗಗಳನ್ನು, ಪ್ರಾಣಿಗಳನ್ನು, ಪಕ್ಷಿಗಳನ್ನು ಒಣ ಮಾದರಿಯಲ್ಲಿ ಸಂರಕ್ಷಿಸುವ ಸಹಕಾರಿಯಾಗಲಿದೆ ಎಂದು ಹೇಳಿದರು.
ಫಾರ್ಮಾಲಿನ್ ಒಂದು ಸೋಂಕು ನಿವಾರಕ ಮತ್ತು ಸಂರಕ್ಷಕವಾಗಿ ಬಳಸಲಾಗುತ್ತದೆ. ವೈದ್ಯಕೀಯ ಮತ್ತು ಪಶು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರ ಕಲಿಯುವುದಕ್ಕಾಗಿ ತಮ್ಮ ಮೊದಲನೆ ವರ್ಷದ ಅಧ್ಯಯನ ಸಮಯದಲ್ಲಿ ಫಾರ್ಮಾಲಿನ್‌ನಲ್ಲಿ ಸಂರಕ್ಷಿಸಿದ ಶವ ಉಪಯೋಗಿಸುತ್ತಾರೆ. ಆದರೆ, ಇದು ಘನೀಕೃತ ವಾಸನೆ ಇರುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಕ್ಯಾನ್ಸರ್‌ದಂತಹ ಕಾಯಿಲೆಗೆ ತುತ್ತಾಗುತ್ತಾರೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಪ್ಲಾಸ್ಟಿನೇಷನ್ ಎಂಬ ದ್ರವಣ ಕಂಡು ಹಿಡಿದಿದ್ದು, ಇದರ ಮೂಲಕ ಅಂಗಾಂಗಗಳನ್ನು ಬ್ರಾಂಕಿಯಲ್ ಕ್ಯಾಸ್ಟ್, ಬಲೂನ್ ಇನ್‌ಫ್ಲೇಶನ್, ಕರೋಷನ್ ಕ್ಯಾಸ್ಟ್, ಡೆಂಚರ್ ಮೆಟೀರಿಯಲ್, ಶೀಟ್ ಪ್ಲಾಸ್ಟಿನೇಷನ್ ಸೇರಿದಂತೆ ಹಲವು ವಿಧಾನಗಳಲ್ಲಿ ಸಂರಕ್ಷಿಸಬಹುದಾಗಿದೆ. ಈ ಮಾದರಿಗಳು ಗಟ್ಟಿಯಾಗಿರುತ್ತದೆ. ಆದರೆ, ಎಲ್ಲ ಅಂಗ ರಚನಾ ವಿವರಗಳನ್ನು ನೋಡಬಹುದಾಗಿದೆ. ಇದರಿಂದ ಅಂಗಾಂಗಗಳನ್ನು ಹಲವು ವರ್ಷಗಳವರೆಗೆ ಸಂರಕ್ಷಿಡಬಹುದಾಗಿದೆ ಎಂದು ವಿವರಿಸಿದರು.
ಈ ಪ್ಲಾಸ್ಟಿನೇಷನ್ ದ್ರಾವಣವನ್ನು ತಯಾರಿಸಲು 1.5 ರಿಂದ 2 ತಿಂಗಳು ಕಾಲಾವಕಾಶ ಬೇಕಾಗುತ್ತದೆ. ರಾಜ್ಯ ಸೇರಿದಂತೆ ದೇಶಧ ಯಾವುದೇ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳನ್ನು ನಮ್ಮಲ್ಲಿ ಸಂಪರ್ಕಿಸಿದರೆ ಅವರಿಗೆ ಈ ದ್ರಾವಣ ತಯಾರಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 98805 49185 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದರು.
ವಿದ್ಯಾರ್ಥಿನಿಯರಾದ ತೇಜಸ್ವಿನಿ, ಉಷಾ ಮಾತನಾಡಿ, ಈ ಹಿಂದೆ ಪ್ರಯೋಗಾಲಯದಲ್ಲಿ ಫಾರ್ಮಲಿನ್‌ನಲ್ಲಿ ಸಂಗ್ರಹ ಮಾಡಿದ ಅಂಗಾಂಗಗಳ ಅಧ್ಯಯನ ಮಾಡುವಾಗ ಕಣ್ಣು ಉರಿ, ಮೂಗು ಉರಿ, ಕಣ್ಣಲ್ಲಿ ನೀರು ಬರುವುದು ಸೇರಿದಂತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೆವು. ಇದರಿಂದ ಮುಂದಿನ ದಿನಗಳಲ್ಲಿ ಕ್ಯಾನ್ಸರ್‌ನಂತಹ ರೋಗ ಬರುವ ಸಾಧ್ಯತೆ ಇದೆ. ಆದರೆ, ಈ ಹೊಸ ತಂತ್ರಜ್ಞಾನದಿಂದ ಯಾವುದೇ ರೋಗಗಳು ಕಾಣಿಸಿಕೊಳ್ಳುವುದಿಲ್ಲ ಎಂದರು.







