ಉತ್ತರ ಕೊರಿಯಾ: ಅಣುಬಾಂಬ್ ಪರೀಕ್ಷೆಗೆ 200 ಬಲಿ

ಟೋಕಿಯೊ, ಅ. 31: ಕಳೆದ ತಿಂಗಳು ಉತ್ತರ ಕೊರಿಯ ಜಲಜನಕ ಬಾಂಬ್‌ನ ಪರೀಕ್ಷೆ ನಡೆಸಿದ ಬಳಿಕ, ಪುಂಗ್ಯೆ-ರಿ ಪರಮಾಣು ಪರೀಕ್ಷಾ ಸ್ಥಳದಲ್ಲಿನ ಸುರಂಗಗಳು ಕುಸಿದು 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಜಪಾನ್‌ನ ‘ಅಸಾಹಿ ಟಿವಿ’ ಮಂಗಳವಾರ ವರದಿ ಮಾಡಿದೆ.
ಉತ್ತರ ಕೊರಿಯದ ಈಶಾನ್ಯ ಭಾಗದಲ್ಲಿರುವ ಪುಂಗ್ಯೆ-ರಿ ಎಂಬಲ್ಲಿ ಸುರಂಗವೊಂದನ್ನು ನಿರ್ಮಿಸುತ್ತಿದ್ದ ವೇಳೆ ಕುಸಿತ ಸಂಭವಿಸಿದೆ ಎಂದು ಉತ್ತರ ಕೊರಿಯದ ಮೂಲಗಳನ್ನು ಉಲ್ಲೇಖಿಸಿ ಚಾನೆಲ್ ವರದಿ ಮಾಡಿದೆ.
ಮೊದಲ ಕುಸಿತದಲ್ಲಿ ಸುಮಾರು 100 ಮಂದಿ ಕಾರ್ಮಿಕರು ಮೃತಪಟ್ಟರು ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದಾಗ ಇನ್ನೊಂದು ಕುಸಿತ ಸಂಭವಿಸಿತು ಹಾಗೂ ಮೃತರ ಒಟ್ಟು ಸಂಖ್ಯೆ 200ಕ್ಕೂ ಅಧಿಕವಾಗಿದೆ ಎಂದು ವರದಿ ತಿಳಿಸಿದೆ.
ಸೆಪ್ಟಂಬರ್ 3ರಂದು ಉತ್ತರ ಕೊರಿಯ ನಡೆಸಿದ 100 ಕಿಲೋಟನ್ ಹೈಡ್ರೋಜನ್ ಬಾಂಬ್ ಸ್ಫೋಟದಿಂದಾಗಿ ಪರೀಕ್ಷಾ ಸ್ಥಳವು ದುರ್ಬಲವಾಗಿತ್ತು ಎನ್ನಲಾಗಿದೆ.
ಉತ್ತರ ಕೊರಿಯ ಸ್ಫೋಟಿಸಿದ ಹೈಡ್ರೋಜನ್ ಬಾಂಬ್, 1945ರಲ್ಲಿ ಅಮೆರಿಕ ಹಿರೋಶಿಮ ಮೇಲೆ ಹಾಕಿದ ಪರಮಾಣು ಬಾಂಬ್‌ಗಿಂತ 7 ಪಟ್ಟು ಅಧಿಕ ಶಕ್ತಿಶಾಲಿಯಾಗಿತ್ತು ಎಂದು ಪರಿಣತರು ಹೇಳಿದ್ದಾರೆ.
ಹೈಡ್ರೋಜನ್ ಬಾಂಬ್ ಸ್ಫೋಟವು ಪರಮಾಣು ಪರೀಕ್ಷಾ ಸ್ಥಳವಿರುವ ಪರ್ವತದಲ್ಲಿ 60ರಿಂದ 100 ಮೀಟರ್ ಆಳದ ಕುಳಿಯನ್ನು ನಿರ್ಮಿಸಿತ್ತು.







