ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಕ್ಕೆ ವಿರೋಧಿಸಿ ಪ್ರತಿಭಟನೆ

ಬೆಂಗಳೂರು, ಅ.31: ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ನಿಷೇಧ ಹೇರಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಖಂಡಿಸಿ ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘದ ಪದಾಧಿಕಾರಿಗಳು ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.
ಮಂಗಳವಾರ ನಗರದ ಕೇಂದ್ರೀಯ ರೈಲ್ವೇ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಬಾಕು ಉತ್ಪನ್ನಗಳ ವರ್ತಕರು, ರೀಟೇಲರ್‌ಗಳು ಮತ್ತು ಪಾನ್‌ವಾಲಾಗಳು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ನಿಷೇಧ ಕಾನೂನು ಜಾರಿಗೆ ಬಂದರೆ ಲಕ್ಷಾಂತರ ವರ್ತಕರು, ರೀಟೇಲರ್‌ಗಳು ಮತ್ತು ಪಾನ್‌ವಾಲಾಗಳು ಬೀದಿಗೆ ಬೀಳಲಿದ್ದಾರೆ. ಹೀಗಾಗಿ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ನಿಷೇಧ ಪ್ರಸ್ತಾವನೆಯನ್ನು ಕೂಡಲೇ ಕೇಂದ್ರ ಸರಕಾರ ಕೈ ಬಿಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಬಿ.ಎನ್.ಮುರಳಿಕೃಷ್ಣ ಮಾತನಾಡಿ, ಕೇಂದ್ರ ಆರೋಗ್ಯ ಇಲಾಖೆಯ ಸಚಿವಾಲಯವು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದು ರೀಟೇಲ್ ಶಾಪ್‌ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟಕ್ಕೆ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಿದೆ. ಈ ಕ್ರಮದಿಂದ ತಂಬಾಕು ಉತ್ಪನ್ನಗಳ ವರ್ತಕರು, ರೀಟೇಲರ್‌ಗಳು ಮತ್ತು ಪಾನ್‌ವಾಲಾಗಳಿಗೆ ಆಘಾತವಾಗಿದೆ ಎಂದು ಹೇಳಿದರು.
ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಕೆಳವರ್ಗದಿಂದ ಬಂದವರು. ಇವರಲ್ಲಿ ಬಹುತೇಕ ಮಂದಿ ಸಣ್ಣ ರೀಟೇಲ್ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈಗ ದಿಢೀರ್ ಈ ಕಾನೂನು ಜಾರಿಗೆ ತಂದರೆ ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಅಸಹಾಯಕತೆ ತೋಡಿಕೊಂಡರು.
ಕಾನೂನನ್ನು ಕೈಬಿಟ್ಟು ರೀಟೇಲ್ ವ್ಯಾಪಾರಿಗಳನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಬೇಕು. ಒಂದು ವೇಳೆ ಈ ಕಾನೂನನ್ನು ವಾಪಸ್ ಪಡೆಯದಿದ್ದರೆ, ಜೀವನ ಸಾಗಿಸಲು ಸಣ್ಣ ರೀಟೇಲರ್‌ಗಳು ಅಕ್ರಮವಾಗಿ ಮಾರಾಟ ಮಾಡುವ ಚಟುವಟಿಕೆಗಳಲ್ಲಿ ತೊಡಗಲು ಪರೋಕ್ಷವಾಗಿ ನೀವೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಕಾರ್ಯದರ್ಶಿ ಎಚ್.ಮುನಿರಾಮ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಂಬಂಧಿತ ಕ್ಷೇತ್ರಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆಯಬೇಕು. ಆದರೆ, ಆರೋಗ್ಯ ಇಲಾಖೆ ಸಣ್ಣ ರೀಟೇಲರ್‌ಗಳನ್ನು ಸಂಪರ್ಕಿಸಿದೆ ನಮ್ಮ ಹಿತಾಸಕ್ತಿಯನ್ನು ಗಾಳಿಗೆ ತೂರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ವಿರೋಧವನ್ನು ಲೆಕ್ಕಿಸದೆ ಈ ಕಾನೂನು ಜಾರಿಗೊಳಿಸಿದರೆ, ಈ ಕ್ರಮದಿಂದ ನಿರುದ್ಯೋಗಿಗಳಾಗುವ ರೀಟೇಲರ್‌ಗಳು ಮತ್ತು ಪಾನ್‌ವಾಲಾಗಳು ಶಾಶ್ವತವಾಗಿ ಸರಕಾರಿ ಉದ್ಯೋಗ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.







