ಕಸ ವಿಲೇವಾರಿ ಅವ್ಯವಹಾರ ಸಿಬಿಐ ತನಿಖೆಗೆ ವಹಿಸಲು ಆಗ್ರಹ
ಬೆಂಗಳೂರು, ಅ. 31: ನಗರದ 198 ವಾರ್ಡ್‌ಗಳಲ್ಲಿ ಕಸ ವಿಲೇವಾರಿಯಲ್ಲಿ ನಡೆದಿರುವ ಐನೂರು ಕೋಟಿ ರೂ.ಗಳಿಗೂ ಹೆಚ್ಚಿನ ಭ್ರಷ್ಟಾಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷದ ನಾಯಕ ಪದ್ಮಾನಾಭರೆಡ್ಡಿ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಪಾಲಿಕೆ ಸಭೆಯಲ್ಲಿ ನೂತನ ಮೇಯರ್ ಸಂಪತ್ ರಾಜ್ ಮತ್ತು ಪದ್ಮಾವತಿ ನರಸಿಂಹ ಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಕಸ ವಿಲೇವಾರಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡರು.
ಡಂಪಿಂಗ್ ಯಾರ್ಡ್, ಸಂಸ್ಕರಣ ಘಟಕಗಳು, ಯಂತ್ರಗಳ ಖರೀದಿಯಲ್ಲಿ ವ್ಯವಹಾರದಲ್ಲಿ ಘನ ತಾಜ್ಯ ವಿಭಾಗದ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ವಂಚನೆ ಮಾಡಿದ್ದಾರೆ. ಈ ಕುರಿತು ಕೂಡಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಒಂದು ಕಡೆ ಸರಕಾರ ಕಸದ ವಿಚಾರದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಎಸಿಬಿ ತನಿಖೆಗೆ ಒಪ್ಪಿಸಿ ಕೈ ತೊಳೆದುಕೊಂಡಿದೆ. ಅಲ್ಲದೆ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ಪೌರ ಕಾರ್ಮಿಕರ ಸಂಖ್ಯೆಯನ್ನು ಇಳಿಕೆ ಮಾಡಲಾಗಿದೆ ಎಂದು ಆರೋಪಿಸಿದರು.





