ನಾನು ಕರಾಟೆಪಟುವಾಗಿರಬಹುದು, ವಿಕೃತ ಮನೋಭಾವ ನನ್ನಲ್ಲಿಲ್ಲ!
ಹಲ್ಲೆ ಪ್ರಕರಣದ ಬಗ್ಗೆ ಮೇಯರ್ ಮರು ಸ್ಪಷ್ಟನೆ

ಮಂಗಳೂರು, ಅ.31: ತಾನು ವಾಸಿಸುತ್ತಿರುವ ಫ್ಲಾಟ್‌ನ ವಾಚ್ ಮ್ಯಾನ್ ಪತ್ನಿ ಹಾಗೂ ಮಗುವಿನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಸ್ಪಷ್ಟನೆ ನೀಡಿರುವ ಮೇಯರ್ ಕವಿತಾ ಸನಿಲ್, ತಾನು ಹಲ್ಲೆ ನಡೆಸಿಲ್ಲ, ಮಗುವನ್ನು ಎಸೆದಿಲ್ಲ ಎಂಬುದನ್ನು ಪ್ರಮಾಣ ಮಾಡಿ ಹೇಳುತ್ತೇನೆ. ಯಾವ ಕ್ಷೇತ್ರದಲ್ಲಿಯೂ ಪ್ರಮಾಣ ಮಾಡಲು ಸಿದ್ಧ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯ ಬಳಿಕ ಮಾತನಾಡಿದ ಮೇಯರ್ ಕವಿತಾ ಸನಿಲ್, ನಾಲ್ಕನೆ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳನ್ನು ರಾತ್ರಿ ಹೊತ್ತು ವಾಚ್ ಮ್ಯಾನ್ ಪತ್ನಿ ಅಟ್ಟಾಡಿಸಿಕೊಂಡು ಓಡಿಸಿ, ಬೆದರಿಸಿದ ಬಗ್ಗೆ ಮರುದಿನ ನಾನು ಅವರ ರೂಂಗೆ ಹೋಗಿ ಪ್ರಶ್ನಿಸಿದ್ದು ಹೌದು. ಆದರೆ ಕೇವಲ ನಾಲ್ಕೈದು ನಿಮಿಷಗಳ ಅಂತರದಲ್ಲಿ ನಾನು ರೂಂನಿಂದ ಹೊರ ಬಂದಿದ್ದೇನೆ. ನನ್ನ ಬೆನ್ನಿಗೇ ವಾಚ್ ಮ್ಯಾನ್ ಪತ್ನಿ ಹಾಗೂ ಇತರರು ಹೊರ ಬಂದಿದ್ದಾರೆ ಈ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ದಾಖಲೆ ಇದೆ ಎಂದರು.
ನಾನು ಹೋದಾಗ ರೂಂನ ಬಾಗಿಲು ಮುಚ್ಚಿದ್ದರಿಂದ ಬಾಗಿಲು ಬಡಿದಿದ್ದೇನೆ. ವಾಚ್ ಮ್ಯಾನ್ ಬಂದು ಬಾಗಿಲು ತೆರೆದಿದ್ದಾರೆ. ನಾನು ಆತನ ಪತ್ನಿಯೆಂದು ಕೇಳಿದಾಗ ಆಕೆ ಮತ್ತು ಇತರ ಇಬ್ಬರು ಅಲ್ಲೇ ಬದಿಯಲ್ಲಿದ್ದರು. ನೀನು ಯಾಕೆ ಮಗುವನ್ನು ಓಡಿಸಿದ್ದಿ, ನಿನ್ನ ಮೇಲೆ ಕಂಪ್ಲೇಟ್ ಮಾಡುತ್ತೇನೆ ಎಂದು ಹೇಳಿ ನನ್ನ ಕೆಲಸದ ನಿಮಿತ್ತ ಹೋಗಿದ್ದೇನೆ. ಇದಾಗಿ ಎರಡು ನಿಮಿಷದಲ್ಲೇ ವಾಚ್ ಮ್ಯಾನ್ ಪತ್ನಿ ಹೊರಬಂದಿದ್ದಾರೆ. ಬಳಿಕ 15 ನಿಮಿಷಗಳ ಅವಧಿಯಲ್ಲಿ ಮಕ್ಕಳು ಹಾಗೂ ಅವರ ಮನೆಯವರೆಲ್ಲರೂ ಹೊರಗಡೆ ಟೇಬಲ್ ಬಳಿ ಸಂತಸದಿಂದ ಆಡುತ್ತಿರುವ ದೃಶ್ಯವೆಲ್ಲಾ ಸಿಸಿ ಕ್ಯಾಮರಾದಲ್ಲಿದೆ. ನಾನು ಹೊಡೆದಿದ್ದರೆ ಅಷ್ಟೊಂದು ಬೇಗ ಅವರೆಲ್ಲಾ ಖುಷಿಯಲ್ಲಿ ಇರಲು ಸಾಧ್ಯವೇ? ಮಗುವಿಗೆ ಹಲ್ಲೆ ನಡೆಸಿದ್ದರೆ ಭಯಗೊಂಡಿರಬಹುದಾಗಿದ್ದ ಮಗು ಅಷ್ಟು ಸುಲಭವಾಗಿ ಹೊರಗೆ ಬಂದು ಆಡಲು ಸಾಧ್ಯವೇ? ನಾನು ಈಗಲೂ ಹೇಳುತ್ತಿದ್ದೇನೆ. ನನ್ನನ್ನೂ ತಾಯಿಯ ಸ್ಥಾನದಲ್ಲಿದ್ದು ನೋಡಲಿ. ನಾನು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ವೆನ್ಲಾಕ್ ನ ಎಮರ್ಜೆನ್ಸಿಗೆ ಮಹಿಳೆಯನ್ನು ಕರೆದೊಯ್ದು ದಾಖಲಿಸಲು ಹೇಳಲಾಗಿದೆ. ಆದರೆ ಅವರು ಏನೂ ಇಲ್ಲ ಎಂದು ವಾಪಾಸು ಕಳುಹಿಸಿದ್ದಾರೆ. ನಾನು ಕರಾಟೆ ಪಟು ಆಗಿರಬಹುದು. ಆದರೆ ಮಗುವನ್ನು ಎಸೆಯುವಂತಹ, ಪಂಚ್ ಮಾಡುವಂತಹ ವಿಕೃತ ಮನಸ್ಸು ಹೊಂದಿಲ್ಲ. ಇಂದು ಮನಪಾ ಸಭೆಯ ವೇಳೆಯೂ ವಿಪಕ್ಷದವರ ಆರೋಪದ ವೇಳೆ ನನ್ನ ಮಗಳ ಸ್ಥಿತಿಯನ್ನು ನೆನೆದು ನನಗೆ ಅಳು ತಡೆಯಲಾಗಲಿಲ್ಲ ಎಂದು ಮೇಯರ್ ವಿವರ ನೀಡಿದರು.
ಈ ಸಂದರ್ಭ ಉಪಸ್ಥಿತರಿದ್ದ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಇಂದು ನಡೆದ ಘಟನೆ ಬೇಸರದ ಸಂಗತಿ, ವೈಯಕ್ತಿಕ ಘಟನೆಯ ಕುರಿತು ಸಾರ್ವಜನಿಕ ಸಮಸ್ಯೆ ಬಗೆಹರಿಸುವ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದೇ ತಪ್ಪು. ಅದರಲ್ಲೂ ಪ್ರತಿಪಕ್ಷದ ನಾಯಕರಿಗೆ ಪ್ರಕರಣದ ಬಗ್ಗೆ ಮಾತನಾಡಲು ಕಾಲಾವಕಾಶ ನೀಡಲಾ ಗಿತ್ತು. ಆದರೆ ಮೇಯರ್ ಮೇಲಿನ ಆರೋಪಕ್ಕೆ ಅವರಿಗೆ ಸ್ಪಷ್ಟೀಕರಣ ನೀಡಲು ಅವಕಾಶ ನೀಡದೆ ಗೂಂಡಾವರ್ತನೆ ತೋರಲಾಗಿದೆ. ಇದು ಮನಪಾ ಸದಸ್ಯರಿಗೆ ಶೋಭೆ ತರುವಂತದ್ದು ಅಲ್ಲ ಎಂದರು.
ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಬಿತಾ ಮಿಸ್ಕಿತ್ ಹಾಗೂ ಆಡಳಿತ ಪಕ್ಷದ ಸದಸ್ಯರು ಉಪಸ್ಥಿತರಿದ್ದರು.







