ಕೇರಳದ ಕಮ್ಯುನಿಸ್ಟ್ ಸರ್ಕಾರಕ್ಕೆ 'ದಿ ವಾಷಿಂಗ್ಟನ್ ಪೋಸ್ಟ್' ಪ್ರಶಂಸೆ
ಮುಖಪುಟದಲ್ಲೇ ಲೇಖನ

ತಿರುವನಂತಪುರ, ಅ. 31: ಕೇರಳದ ಆಡಳಿತದಲ್ಲಿ ಅನೇಕ ಸಾಧನೆಗಳನ್ನು ಮಾಡಿದ ಸಿಪಿಎಂ ಅನ್ನು ಪ್ರಶಂಸಿಸಿ ಅಮೆರಿಕದ ಪ್ರಮುಖ ದಿನಪತ್ರಿಕೆಗಳಲ್ಲಿ ಒಂದಾದ ದಿ ವಾಷಿಂಗ್ಟನ್ ಪೋಸ್ಟ್ ಲೇಖನ ಬರೆದಿದೆ.
ಕಮ್ಯುನಿಸ್ಟರಿಗೆ ಕನಸು ಕಾಣಲು ಸಣ್ಣ ರಾಜ್ಯ ಕೇರಳ ಒಂದು ಅವಕಾಶ ಒದಗಿಸಿದೆ ಎಂದು ದಿ ವಾಷಿಂಗ್ಟನ್ ಪೋಸ್ಟ್‌ನ ಅಕ್ಟೋಬರ್ 29ರ ಆವೃತ್ತಿಯ ಮುಖಪುಟದಲ್ಲಿ ಎ ಕಮ್ಯೂನಿಸ್ಟ್ ಸೆಕ್ಸಸ್ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಲಾದ ಲೇಖನ ಹೇಳಿದೆ.

ಭಾರತದ ಸಣ್ಣ ರಾಜ್ಯವಾದ ಕೇರಳದಲ್ಲಿ ಕಾರ್ಲ್ ಮಾರ್ಕ್ಸ್‌ನ ಪಕ್ಷ ಉತ್ತಮ ಸಾಧನೆ ಮಾಡಿದೆ. ನಿರಂಕುಶ ಶಕ್ತಿಗೆ ತಲೆಬಾಗುವ ಬದಲು ಕೇರಳದ ಕಮ್ಯೂನಿಸ್ಟರು ಚುನಾವಣಾ ರಾಜಕಾರಣವನ್ನು ಅಪ್ಪಿಕೊಂಡಿದ್ದಾರೆ ಹಾಗೂ 1957ರಿಂದ ಆಗಾಗ ಅಧಿಕಾರಕ್ಕೆ ಬರುತ್ತಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಜಗತ್ತಿನ ಇತರ ಭಾಗಗಳಂತೆ ರಾಜ್ಯದಲ್ಲಿ ಕಮ್ಯುನಿಸ್ಟ್ ಚಳವಳಿ ಧರ್ಮವನ್ನು ಯಾವತ್ತೂ ಹತ್ತಿಕ್ಕಲು ಪ್ರಯತ್ನಿಸಿಲ.ರಾಜ್ಯದಲ್ಲಿ ಎಡಪಂಥೀಯ ಚಳವಳಿ ಅಭಿವೃದ್ಧಿಯನ್ನು ವಿವಿಧ ಹಂತಗಳಲ್ಲಿ ದಾಖಲಿಸಿದೆ. ಲೇಖನದಲ್ಲಿ ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ ರಾಜ್ಯ ವಿತ್ತ ಸಚಿವ ಹಾಗೂ ಅರ್ಥಶಾಸ್ತ್ರಜ್ಞ ಟಿ.ಎಂ. ಥೋಮಸ್ ಐಸಾಕ್ ಅವರ ಸಂದರ್ಶನ ಬಳಸಿಕೊಳ್ಳಲಾಗಿದೆ.
ಚೀನಾ, ಲ್ಯಾಟಿನ್ ಅಮೆರಿಕ ಅಥವಾ ಪೂರ್ವ ಯುರೋಪ್‌ನ ಕಮ್ಯುನಿಸ್ಟ್ ಪಕ್ಷದ ನಾಯಕರಂತೆ ಕೇರಳದ ನಾಯಕರು ಫ್ಯಾಕ್ಟರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿಲ್ಲ. ಖಾಸಗಿ ಆಸ್ತಿ ನಿಷೇಧಿಸಲಿಲ್ಲ ಎಂದು ಪತ್ರಿಕೆ ಪ್ರಶಂಶಿಸಿದೆ.
ಇದಕ್ಕೆ ಬದಲಾಗಿ ಇಲ್ಲಿನ ಎಡಪಕ್ಷ ಕಾಂಗ್ರೆಸ್ ಪಕ್ಷದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಕೆಲವು ಬಾರಿ ಜಯಗಳಿಸಿದೆ. ಕೆಲವು ಬಾರಿ ಸೋತಿದೆ ಎಂದು ದಿ ವಾಷಿಂಗ್ಟನ್ ಪೋಸ್ಟ್ ತನ್ನ ಲೇಖನದಲ್ಲಿ ಪ್ರಶಂಸಿಸಿದೆ.







