ದೇವರ ದರ್ಶನಕ್ಕೆ ಭಕ್ತಿ ಮುಖ್ಯ: ಎಚ್.ಆಂಜನೇಯ
ಬೆಂಗಳೂರು, ಅ.31: ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳದ ದೇವಸ್ಥಾನಕ್ಕೆ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಲಸವಿಲ್ಲದವರು, ಇಲ್ಲಸಲ್ಲದ್ದನ್ನು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿರುಗೇಟು ನೀಡಿದ್ದಾರೆ.
ಮಂಗಳವಾರ ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರ ದರ್ಶನಕ್ಕೆ ಭಕ್ತಿ ಮುಖ್ಯವೇ ಹೊರತು, ಆಹಾರ ಮುಖ್ಯವಲ್ಲ ಎಂದರು.
ನಾನು ಚಿಕ್ಕವನಿದ್ದಾಗ ಏನಾದರೂ ತಪ್ಪು ಮಾಡಿದರೆ ನನ್ನ ಪೋಷಕರು ಮಸೀದಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಿದ್ದರು. ಅಂದರೆ, ಮಸೀದಿ ಅಷ್ಟೊಂದು ಪವಿತ್ರವಾದ ಕ್ಷೇತ್ರ. ಹಾಗೆಯೇ, ಧರ್ಮಸ್ಥಳದಲ್ಲಿರುವ ಮಂಜುನಾಥ ಕ್ಷೇತ್ರವು ಪವಿತ್ರವಾದದ್ದು ಎಂದು ಅವರು ಹೇಳಿದರು.
ಯಾರಾದರೂ ತಪ್ಪು ಮಾಡಿದರೆ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ಹೆದರಿಸುತ್ತಿದ್ದರು. ಅಷ್ಟರಮಟ್ಟಿಗೆ ಧರ್ಮಸ್ಥಳವು ಭಕ್ತರ ಪಾಲಿಗೆ ಪವಿತ್ರವಾಗಿದೆ ಎಂದು ತಿಳಿಸಿದರು.
ನಟ ಉಪೇಂದ್ರ ಆರಂಭಿಸಿರುವ ಹೊಸ ರಾಜಕೀಯ ಪಕ್ಷದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಯಾವ ಪಕ್ಷವನ್ನಾದರೂ ಸ್ಥಾಪಿಸಬಹುದು. ಪಕ್ಷದಲ್ಲಿ ಯಾರಿರಬೇಕು ಎಂದು ತೀರ್ಮಾನ ಮಾಡುವ ಸ್ವಾತಂತ್ರವೂ ಎಲ್ಲರಿಗೂ ಇದೆ. ಯಾವುದೇ ಪಕ್ಷ ಬರಲಿ, ಹೋಗಲಿ ಕಾಂಗ್ರೆಸ್ ಪಕ್ಷ ಮಾತ್ರ ಶಾಶ್ವತವಾಗಿರುತ್ತದೆ ಎಂದರು.







