‘ಜಾಲತಾಣ’ಗಳಲ್ಲಿ ಕನ್ನಡ ಸದ್ಬಳಕೆ ಆಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಅ. 31: ಕನ್ನಡ ಎಲ್ಲ ಹಂತಗಳಲ್ಲೂ ಅನುಷ್ಠಾನಗೊಳ್ಳಬೇಕು. ಬಹಳ ಮುಖ್ಯವಾಗಿ ಜಾಲತಾಣಗಳಲ್ಲಿ ಕನ್ನಡ ಬಳಕೆ ಹೆಚ್ಚುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಲ್ಲಿಸಲಾಗಿರುವ ವರದಿಯನ್ನು ರಾಜ್ಯೋತ್ಸವದ ಸಂದರ್ಭದಲ್ಲಿ ಅಂಗೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಾಧಿಕಾರದಿಂದ ಸರಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ ಕುರಿತು ವರದಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಈ ವರದಿಯ ಶಿಫಾರಸ್ಸುಗಳ ಅನುಷ್ಠಾನಕ್ಕೆ ಸರಕಾರ ಬದ್ಧ ಎಂದು ಘೋಷಿಸಿದರು.
ಆಧುನಿಕ ತಂತ್ರಜ್ಞಾನದ ಅರಿವು ಬಹಳ ಮುಖ್ಯವಾಗಿದ್ದು, ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಕೆ ಮಾಡುವುದರಿಂದ ಜನರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದ ಅವರು, ಒಂದು ವರ್ಷದೊಳಗೆ ಸರಕಾರದ ಎಲ್ಲ ಜಾಲತಾಣಗಳು ಸಂಪೂರ್ಣ ಕನ್ನಡದಲ್ಲಿರಬೇಕು. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಅವರು ಆಶಯವನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಯಾವುದೇ ಭಾಷೆಯ ಪ್ರಗತಿ ಹೊಸ ಜ್ಞಾನಶಾಖೆಗಳಿಗೆ ತೆರೆದುಕೊಂಡಾಗ ಮಾತ್ರ ಸಾಧ್ಯ. ಸರಕಾರವು ಜನಸ್ನೇಹಿಯಾಗಿ ತಂತ್ರಾಂಶವನ್ನು ಬಳಕೆ ಮಾಡುವುದರಿಂದ ಸರಕಾರದ ಯೋಜನೆಗಳು ನೇರವಾಗಿ ಜನರಿಗೆ ತಲುಪಿಸಲು ಉಪಯುಕ್ತ ಎಂದರು.
ಪ್ರಾಧಿಕಾರದ ವತಿಯಿಂದ ಕರ್ನಾಟಕ ಸರಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ ಕುರಿತ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಹೊಸ ಜ್ಞಾನ ಶಾಖೆಗೆ ಇಂದು ಬಿಡುಗಡೆಯಾಗಿರುವ ಕಂಪ್ಯೂಟರ್ ಪದವಿವರಣ ಕೋಶ ಅತ್ಯಂತ ಉಪಯುಕ್ತ. ಇದು ಹೊಸತನಕ್ಕೆ ತೆರೆದುಕೊಳ್ಳುತ್ತಿರುವ ಯುವಜನತೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ನುಡಿದರು.
ಈ ವೇಳೆ ಕಂಪ್ಯೂಟರ್ ಪದವಿವರಣ ಕೋಶ ಕೃತಿಯನ್ನು ಸಿಎಂ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಜಯಚಂದ್ರ, ಕೆ.ಜೆ.ಜಾರ್ಜ್, ಪ್ರಿಯಾಂಕ ಖರ್ಗೆ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾ.ಕೆ.ಮರುಳಸಿದ್ಧಪ್ಪ, ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ಕಸಾಪ ಅಧ್ಯಕ್ಷ ಮನುಬಳಿಗಾರ್, ಸಾಹಿತಿಗಳಾದ ಪ್ರೊ. ಚಂದ್ರಶೇಖರ ಪಾಟೀಲ, ಡಾ. ಸಿದ್ಧಲಿಂಗಯ್ಯ, ಡಾ.ಬಿ.ಟಿ.ಲಲಿತಾ ನಾಯಕ್, ಜಿ.ಎನ್. ನರಸಿಂಹ ಮೂರ್ತಿ, ತಂತ್ರಾಂಶ ತಜ್ಞ ಬೇಳೂರು ಸುದರ್ಶನ, ಶ್ರೀನಿಧಿ ಉಪಸ್ಥಿತರಿದ್ದರು.







