ಬ್ರಹ್ಮಪುತ್ರ ನದಿಯ ನೀರು ಸಾಗಿಸಲು ಸುರಂಗ ನಿರ್ಮಾಣವಿಲ್ಲ: ಚೀನಾ

ಬೀಜಿಂಗ್, ಅ. 31: ಬ್ರಹ್ಮಪುತ್ರ ನದಿಯ ನೀರನ್ನು ಟಿಬೆಟ್‌ನಿಂದ ಬರಪೀಡಿತ ಕ್ಸಿನ್‌ಜಿಯಾಂಗ್ ವಲಯಕ್ಕೆ ಸಾಗಿಸಲು 1,000 ಕಿ.ಮೀ. ಸುರಂಗವನ್ನು ನಿರ್ಮಿಸಲು ತಾನು ಉದ್ದೇಶಿಸಿದ್ದೇನೆ ಎಂಬ ಮಾಧ್ಯಮ ವರದಿಯು ‘ಸುಳ್ಳು’ ಎಂದು ಚೀನಾ ಮಂಗಳವಾರ ಹೇಳಿದೆ.
ಜಗತ್ತಿನ ಅತ್ಯಂತ ಉದ್ದದ ಸುರಂಗವನ್ನು ನಿರ್ಮಿಸಲು ಬಳಸಬಹುದಾದ ತಂತ್ರಜ್ಞಾನಗಳನ್ನು ಚೀನಾದ ಇಂಜಿನಿಯರ್‌ಗಳು ಪರಿಶೀಲಿಸುತ್ತಿದ್ದಾರೆ ಎಂದು ಹಾಂಕಾಂಗ್‌ನ ಪತ್ರಿಕೆ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಸೋಮವಾರ ಹೇಳಿದೆ.
‘‘ಇದು ಸರಿಯಲ್ಲ. ಇದು ತಪ್ಪು ವರದಿ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗಡಿಯಾಚೆಯ ನದಿ ಸಹಕಾರಕ್ಕೆ ಚೀನಾ ಹೆಚ್ಚಿನ ಮಹತ್ವವನ್ನು ನೀಡುವುದನ್ನು ಮುಂದುವರಿಸುವುದು ಎಂದು ಅವರು ನುಡಿದರು.
ಬ್ರಹ್ಮಪುತ್ರ ನದಿಯ ಫಲಾನುಭವಿಯಾಗಿರುವ ಭಾರತ, ನದಿಗೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರುವ ವಿವಿಧ ಅಣೆಕಟ್ಟೆಗಳ ಬಗ್ಗೆ ಈಗಾಗಲೇ ಆ ದೇಶಕ್ಕೆ ಕಳವಳ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.
ನೀರು ಸಂಗ್ರಹಿಸುವುದಕ್ಕಾಗಿ ತನ್ನ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿಲ್ಲ ಎಂಬುದಾಗಿ ಬೀಜಿಂಗ್ ಭಾರತ ಮತ್ತು ಬಾಂಗ್ಲಾದೇಶಗಳಿಗೆ ಭರವಸೆ ನೀಡುತ್ತಾ ಬಂದಿದೆ.







