ಮುಂದಿನ ಕ್ರಮ ಜರುಗಿಸದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಕಸ ವಿಲೇವಾರಿ ಗುತ್ತಿಗೆದಾರರು, ಪೌರ ಕಾರ್ಮಿಕರ ಮೇಲೆ ಎಸ್ಮಾ ಜಾರಿ
ಬೆಂಗಳೂರು, ಅ.31: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕಸ ವಿಲೇವಾರಿ ಗುತ್ತಿಗೆದಾರರು ಮತ್ತು ಪೌರ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗುವುದನ್ನು ಕಡ್ಡಾಯಗೊಳಿಸುವ ಸಲುವಾಗಿ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಜಾರಿಗೊಳಿಸಿ ಹೊರಡಿಸಿದ ಅಧಿಸೂಚನೆ ಸಂಬಂಧ ಮುಂದಿನ ಕ್ರಮ ಜರಗಿಸದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಎಸ್ಮಾ ಜಾರಿಗೊಳಿಸಿದ ಸರಕಾರದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಎಸ್.ಎನ್.ಬಾಲ ಸುಬ್ರಹ್ಮಣಿಯನ್ ಸೇರಿ ಹಲವು ಗುತ್ತಿಗೆದಾರರು ಹಾಗೂ ಪೌರ ಕಾರ್ಮಿಕರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ನ್ಯಾಯಾಲಯದ ಮುಂದಿನ ಆದೇಶದವರೆಗೆ ಎಸ್ಮಾ ಅಧಿಸೂಚನೆ ಮೇಲೆ ಕ್ರಮ ಜರಗಿಸಬಾರದು ಎಂದು ಸರಕಾರಕ್ಕೆ ಸೂಚಿಸಿ ಮಧ್ಯಂತರ ಆದೇಶ ಮಾಡಿತು.
ಜತೆಗೆ, ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಯುಕ್ತರು, ತ್ಯಾಜ್ಯ ವಿಲೇವಾರಿ ನಿರ್ವಹಣಾ ವಿಶೇಷ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣವೇನು: ನಗರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವುದು, ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರು ಉಂಟಾಗುವುದನ್ನು ತಡೆಗಟ್ಟುವ, ಗುತ್ತಿಗೆದಾರರು ಹಾಗು ಪೌರ ಕಾರ್ಮಿಕರು ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸುವುದು ನಿಯಂತ್ರಿಸುವ ದೃಷ್ಟಿಯಿಂದ ನಗರಾಭಿವೃದ್ಧಿ ಇಲಾಖೆ 2017ರ ಸೆ.23ರಂದು ಎಸ್ಮಾ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿತ್ತು. 2016ರಿಂದ ಕಸ ವಿಲೇವಾರಿಯನ್ನು ಎಸ್ಮಾ ವ್ಯಾಪ್ತಿಗೆ ತರಲಾಗಿತ್ತು. ಇದು ಕಸ ವಿಲೇವಾರಿ ಗುತ್ತಿಗೆದಾರರು ಮತ್ತವರ ಅಧೀನದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಪೌರ ಕಾರ್ಮಿಕರು, ಆಟೋ ಸಹಾಯಕರು, ಕಾಂಪ್ಯಾಕ್ಟರ್ ಲೋಡರ್‌ಗಳು ಮತ್ತು ಚಾಲಕರಿಗೆ ಅನ್ವಯವಾಗಿ ಅಧಿಸೂಚನೆ ಹೊರಡಿಸಲಾಗಿತ್ತು.
ಈ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಗುತ್ತಿಗೆದಾರರು ಹಾಗೂ ಪೌರ ಕಾರ್ಮಿಕರು, ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಸಂಬಂಧ ಎಸ್ಮಾ ಜಾರಿ ಮಾಡುವ ಅಧಿಕಾರ ಕೇಂದ್ರ ಸರಕಾರ ಮಾತ್ರ ಹೊಂದಿದೆ. ಆದರೆ, ರಾಜ್ಯ ಸರಕಾರ ತನ್ನ ಅಧಿಕಾರ ವ್ಯಾಪ್ತಿ ಮೀರಿ ಎಸ್ಮಾ ಕಾಯ್ದೆ ವ್ಯಾಪ್ತಿಗೆ ಗುತ್ತಿಗೆದಾರರು ಹಾಗೂ ಪೌರ ಕಾರ್ಮಿಕರನ್ನು ತಂದಿದೆ. ಆ ಮೂಲಕ ಎಸ್ಮಾ ಕಾಯ್ದೆಯನ್ನು ದುರ್ಬಳಕೆ ಮಾಡಿದೆ. ಇನ್ನು ಈ ಅಧಿಸೂಚನೆಯಲ್ಲಿ ಕೇಂದ್ರ ಸರಕಾರ ಕಾಯ್ದೆಯ ನಿಯಮಗಳನ್ನು ಪಾಲಿಸಿಲ್ಲ. ರಾಜ್ಯ ಸರಕಾರದ ಈ ಕ್ರಮ ತಮ್ಮ ಜೀವಿಸುವ ಹಕ್ಕಿನ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ ಅರ್ಜಿದಾರರು ದೂರಿದ್ದಾರೆ.
ಅಲ್ಲದೆ, ಎಸ್ಮಾ ಜಾರಿಯಿಂದ ಗುತ್ತಿಗೆದಾರರು ಹಾಗೂ ಪೌರ ಕಾರ್ಮಿಕರು ಭ್ರಷ್ಟ ಅಧಿಕಾರಿಗಳ ಜೀತದಾಳುಗಳಂತೆ ಕಾರ್ಯ ನಿರ್ವಹಿಸುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಸುತ್ತದೆ. ತ್ಯಾಜ್ಯ ವಿಲೇವಾರಿಯ ಸಂಬಂಧ ಅಧಿಕಾರಿಗಳ ನಡೆಸುವ ಅವ್ಯವಹಾರಗಳಿಗೆ ಅರ್ಜಿದಾರರನ್ನು ಹೊಣೆಗಾರಿಕೆ ಮಾಡಲಿದೆ. ಹಾಗೆಯೇ, ಎಸ್ಮಾ ಕಾಯ್ದೆಯು ಪೂರ್ವಾನ್ವಯ ಮಾಡಲಾಗದು. ಅಧಿಸೂಚನೆ ಹೊರಡಿಸುವಲ್ಲಿ ಸರಕಾರ ಸೂಕ್ತ ವಿವೇಚನೆ ಬಳಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಹಾಗೆಯೇ, ತಮ್ಮನ್ನು ಎಸ್ಮಾ ವ್ಯಾಪ್ತಿಗೆ ತಂದು ಹೊರಡಿಸಿದ ಅಧಿಸೂಚನೆ ರದ್ದುಪಡಿಸುವಂತೆ ಕೋರಿದ್ದಾರೆ.







