ನಮ್ಮನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ
ಅಮೆರಿಕದ ಶಸ್ತ್ರಾಸ್ತ್ರ ಮಾರಾಟಕ್ಕೆ ಚೀನಾ ರಾಯಭಾರಿ ಪ್ರತಿಕ್ರಿಯೆ

ವಾಶಿಂಗ್ಟನ್, ಅ. 31: ಇಂಡೋ-ಪೆಸಿಫಿಕ್ ವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ವಿಶಿಷ್ಟ ಗುಂಪು’ ಒಂದರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಅಮೆರಿಕಕ್ಕೆ ಚೀನಾದ ರಾಯಭಾರಿ ಸುಯಿ ಟಿಯಂಕಾಯ್, ಈಗ ಚೀನಾವನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಅಮೆರಿಕದ ವಿದೇಶ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಮಾಡಿರುವ ಭಾರತ ಕೇಂದ್ರಿತ ಭಾಷಣ ಹಾಗೂ ಅತ್ಯಾಧುನಿಕ ಶಸ್ತ್ರಸಜ್ಜಿತ ಡ್ರೋನ್‌ಗಳು ಸೇರಿದಂತೆ ಉನ್ನತ ತಂತ್ರಜ್ಞಾನದ ಸೇನಾ ಉಪಕರಣಗಳನ್ನು ಭಾರತಕ್ಕೆ ಮಾರಾಟ ಮಾಡಲು ಟ್ರಂಪ್ ಆಡಳಿತ ತೆಗೆದುಕೊಂಡಿರುವ ನಿರ್ಧಾರ ಮತ್ತು ಭಾರತ ಮತ್ತು ಆಸ್ಟ್ರೇಲಿಯ ಸೇರಿದಂತೆ ಆಯಕಟ್ಟಿನ ಚತುರ್ಮುಖ ಮಾತುಕತೆಗೆ ಜಪಾನ್ ಮುಂದಿಟ್ಟಿರುವ ಪ್ರಸ್ತಾಪಗಳ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಚೀನಾ ರಾಯಭಾರಿ ಉತ್ತರಿಸುತ್ತಿದ್ದರು.
‘‘ಸುಧಾರಿತ ಶಸ್ತ್ರಗಳ ಮಾರಾಟವು ಈ ಉದ್ದೇಶವನ್ನು ಈಡೇರಿಸುತ್ತದೆ ಎಂದು ನನಗೆ ಅನಿಸುವುದಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.
ಭಾರತಕ್ಕೆ ಶಸ್ತ್ರಾಸ್ತ್ರಗಳ ಮಾರಾಟವು ಚೀನಾವನ್ನು ನಿಯಂತ್ರಿಸಲು ಅಮೆರಿಕ ತೆಗೆದುಕೊಂಡ ಕ್ರಮವಾಗಿದೆ ಎಂಬುದಾಗಿ ಪಾಶ್ಚಿಮಾತ್ಯ ವೀಕ್ಷಕರು ಅಭಿಪ್ರಾಯಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.
‘‘ಚೀನಾವನ್ನು ನಿಯಂತ್ರಿಸಲು ಯಾರಿಗಾದರೂ ಸಾಧ್ಯವಾಗುತ್ತದೆ ಎಂದು ನನಗನಿಸುವುದಿಲ್ಲ’’ ಎಂದು ಇಲ್ಲಿನ ಚೀನಾ ರಾಯಭಾರ ಕಚೇರಿಯಲ್ಲಿ ನಡೆಸಿದ ಅಪರೂಪದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.







