ಕನ್ನಡಕ್ಕಾಗಿ ದುಡಿದವರ ನೆನಪು ಜೀವಂತವಾಗಿಡಬೇಕು: ರಾಮಲಿಂಗಾರೆಡ್ಡಿ
ಬೆಂಗಳೂರು, ಅ.31: ಕನ್ನಡ ನಾಡು ನುಡಿಗಾಗಿ ಹೋರಾಡಿದ ಹೋರಾಟಗಾರರ ಹೆಸರನ್ನು ಶಾಶ್ವತವಾಗಿಡುವ ನಿಟ್ಟಿನಲ್ಲಿ ಪುತ್ಥಳಿ ಇಲ್ಲವೆ ರಸ್ತೆಗಳಿಗೆ ಅವರ ಹೆಸರನ್ನು ಇಡುವ ಮೂಲಕ ಮುಂದಿನ ತಲೆಮಾರಿಗೂ ಜೀವಂತವಾಗಿಡುವುದರ ಅಗತ್ಯವಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮಂಗಳವಾರ ಕನ್ನಡ ಸಂಘರ್ಷ ಸಮಿತಿ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ‘ರಹಮಾನ್ ಖಾನ್ ಕನ್ನಡ ಕಟ್ಟಾಳು’, ‘ಸಾಕಮ್ಮ ಮುದ್ದಪ್ಪ ನೆನಪಿನ ನಿಸ್ಸೀಮ ಕನ್ನಡತಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ನಮ್ಮ ನೆಲದ ಭಾಷೆ. ಅದನ್ನು ಉಳಿಸಿ-ಬೆಳೆಸುವುದು ನಮ್ಮ ಜವಾಬ್ದಾರಿ. ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ, ಕನ್ನಡ ಭಾಷೆ ನಮ್ಮ ದಿನನಿತ್ಯದ ಉಸಿರಾಗಬೇಕು. ಕನ್ನಡ ಉಳಿದರೆ ನಮ್ಮ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕನ್ನಡಕ್ಕಾಗಿ ಟೊಂಕ ಕಟ್ಟಬೇಕು ಎಂದು ತಿಳಿಸಿದರು.
ಹೋರಾಟಗಾರರ ಶ್ರಮದ ಫಲವಾಗಿ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಇಂದಿಗೂ ನಮ್ಮ ನಾಲಿಗೆಗಳಲ್ಲಿ ನಲಿದಾಡುತ್ತಿದೆ. ಇಂತಹ ಹಿರಿಯ ಹೋರಾಟಗಾರರ, ಸಾಹಿತಿ-ಕಲಾವಿದರ ನಡೆನುಡಿಗಳು ಇಂದಿನ ಯುವ ಜನತೆಗೆ ಆದರ್ಶವಾಗಬೇಕು. ಆ ನಿಟ್ಟಿನಲ್ಲಿ ನಾಡಿಗಾಗಿ ದುಡಿದ ಹಿರಿಯರ ಹೆಸರುಗಳಲ್ಲಿ ಪ್ರಶಸ್ತಿ ಕೊಡುವುದು, ರಸ್ತೆಗಳಿಗೆ ಅವರ ಹೆಸರನ್ನು ಇಡುವಂತಹ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಎಲ್.ಗಂಗಾಧರ್‌ಗೆ ಕನ್ನಡ ಕಟ್ಟಾಳು ಪ್ರಶಸ್ತಿ, ಎನ್.ವಿಜಯಲಕ್ಷ್ಮಿಗೆ ನಿಸ್ಸೀಮ ಕನ್ನಡತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿಡುಮಾಮಿಡಿ ಮಠದ ಚನ್ನಮಲ್ಲ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ ಮತ್ತಿತರರಿದ್ದರು.
ಬಾಕ್ಸ್
ವೌಢ್ಯಾಚರಣೆ ನಿಷೇಧ ಕಾಯ್ದೆಯ ಮಸೂದೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಬೆಳಗಾವಿ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಅಂಗೀಕರಿಸಿ ಕಾಯ್ದೆ ರೂಪಕ್ಕೆ ತರಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜನರನ್ನು ಶೋಷಿಸುವ ವೌಢ್ಯಾಚರಣೆಗಳಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕಲಾಗುವುದು.
-ರಾಮಲಿಂಗಾರೆಡ್ಡಿ ಗೃಹ ಸಚಿವ







