ಅಮೆರಿಕ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪದ ತನಿಖೆ: ಓರ್ವನಿಂದ ತಪ್ಪೊಪ್ಪಿಗೆ

ವಾಶಿಂಗ್ಟನ್, ಅ. 31: ಅಮೆರಿಕದ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಟ್ರಂಪ್ ಪ್ರಚಾರ ತಂಡದ ಮಾಜಿ ಅಧ್ಯಕ್ಷ ಪೌಲ್ ಮನಫೋರ್ಟ್ ಮತ್ತು ಅವರ ಸಹಾಯಕ ರಿಕ್ ಗೇಟ್ಸ್ ಸೋಮವಾರ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.
ಅದೇ ವೇಳೆ, ರಶ್ಯದ ಅಧಿಕಾರಿಗಳನ್ನು ಭೇಟಿಯಾದ ಸಮಯದ ಬಗ್ಗೆ ತಾನು ಎಫ್‌ಬಿಐಗೆ ಸುಳ್ಳು ಹೇಳಿರುವುದನ್ನು ಟ್ರಂಪ್ ಪ್ರಚಾರ ತಂಡದ ಸಲಹಾಕಾರ ಜಾರ್ಜ್ ಪ್ಯಾಪಡಪೋಲಸ್ ಒಪ್ಪಿಕೊಂಡಿದ್ದಾರೆ.
ಈ ನಡುವೆ, ಪ್ರಕರಣದ ಆರೋಪಿಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಶ್ವೇತಭವನ ಹೇಳಿದೆ.
ಫೆಡರಲ್ ನ್ಯಾಯಾಲಯವೊಂದರಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು ಮನಫೋರ್ಟ್ ಜಾಮೀನಿಗೆ ಒಂದು ಕೋಟಿ ಡಾಲರ್ ಮತ್ತು ಗೇಟ್ಸ್ ಜಾಮೀನಿಗೆ 50 ಲಕ್ಷ ಡಾಲರ್ ಭದ್ರತೆಯನ್ನು ನಿಗದಿಪಡಿಸಿದರು. ತಮ್ಮ ಪಾಸ್‌ಪೋರ್ಟ್‌ಗಳನ್ನು ಸಲ್ಲಿಸುವಂತೆಯೂ ನ್ಯಾಯಾಧೀಶರು ಈ ಇಬ್ಬರಿಗೆ ಸೂಚಿಸಿದರು.
2016ರ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಅಮೆರಿಕದ ವಿರುದ್ಧ ಪಿತೂರಿ ಹೂಡಿದ ಆರೋಪ ಸೇರಿದಂತೆ 12 ಆರೋಪಗಳನ್ನು ಈ ಇಬ್ಬರ ವಿರುದ್ಧ ಹೊರಿಸಿದ್ದಾರೆ.
ಯುಕ್ರೇನ್ ಸರಕಾರದ ಪರವಾಗಿ ಕೆಲಸ ಮಾಡುತ್ತಿದ್ದ ತಮ್ಮನ್ನು ವಿದೇಶಿ ದಲ್ಲಾಳಿಗಳು ಎಂಬುದಾಗಿ ಘೋಷಿಸಲು ವಿಫಲವಾಗಿರುವುದು ಮತ್ತು ತೆರಿಗೆ ತಪ್ಪಿಸುವುದಕ್ಕಾಗಿ ವಿದೇಶಿ ಆದಾಯವನ್ನು ಮುಚ್ಚಿಟ್ಟಿರುವುದು ಮತ್ತು ತಪ್ಪು ಹೇಳಿಕೆಗಳನ್ನು ನೀಡಿರುವುದು- ಇವೇ ಮುಂತಾದ ಆರೋಪಗಳು ಅವರ ವಿರುದ್ಧ ದಾಖಲಾಗಿವೆ.
ಆರೋಪಗಳನ್ನು ತಳ್ಳಿ ಹಾಕಿದ ಶ್ವೇತಭವನ
ಮನಫೋರ್ಟ್ ವಿರುದ್ಧ ಹೊರಿಸಲಾದ ದೋಷಾರೋಪವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ.
ತನ್ನ ಪ್ರಚಾರ ತಂಡದ ಮ್ಯಾನೇಜರ್ ವಿರುದ್ಧ ಹೊರಿಸಲಾದ ಆರೋಪಗಳು ಚುನಾವಣಾ ಪ್ರಚಾರ ಸಮಯದಲ್ಲಿ ನಡೆದುದಲ್ಲ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ರಶ್ಯದ ಅಧಿಕಾರಿಗಳ ಭೇಟಿಯ ಬಗ್ಗೆ ತಾನು ಎಫ್‌ಬಿಐಗೆ ನೀಡಿರುವ ಹೇಳಿಕೆ ಸುಳ್ಳು ಎಂಬುದನ್ನು ಒಪ್ಪಿಕೊಂಡಿರುವ ಪ್ಯಾಪಡಪೋಲಸ್, ಟ್ರಂಪ್ ಪ್ರಚಾರ ತಂಡದಲ್ಲಿದ್ದ ಓರ್ವ ‘ಸ್ವಯಂಸೇವಕ’ ಮಾತ್ರ ಎಂದು ಶ್ವೇತಭವನ ಹೇಳಿದೆ.







