ಆರೋಪಿಗಳ ವಿರುದ್ಧ ವಿಚಾರಣೆ ನಡೆಸಲು ಪ್ರಾಧಿಕಾರದಿಂದ ಅನುಮತಿ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ
ರಾಜ್ಯ ಸರಕಾರ ಹೈಕೋರ್ಟ್‌ಗೆ ಹೇಳಿಕೆ
ಬೆಂಗಳೂರು, ಅ.31: 2011ರ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಅಕ್ರಮಕ್ಕೆ(ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ) ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವವರ ವಿರುದ್ಧ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ರಾಜ್ಯಸರಕಾರ ಹೈಕೋರ್ಟ್‌ಗೆ ತಿಳಿಸಿದೆ.
2011ರ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಕೆಪಿಎಸ್ಸಿ ಮೂಲಕ ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಅನುತ್ತೀರ್ಣ ಅಭ್ಯರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ಮುಂದುವರಿಸಿತು.
ವಿಚಾರಣೆ ವೇಳೆ, ಡಾ.ಮೈತ್ರಿ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು ಕೇಸಿನ ಮೆರಿಟ್ (ಯೋಗ್ಯತೆ) ಮೇಲೆಯೇ ವಾದ ಮಂಡಿಸಿದರು. ಸಿಐಡಿ ವರದಿ ಚಾರ್ಚ್‌ಶೀಟ್ ಸಲ್ಲಿಸಿ ಒಂಬತ್ತು ತಿಂಗಳಾಗಿದೆ. ಆದರೆ ಸರಕಾರ ಆರೋಪಿಗಳ ವಿರುದ್ಧ ಇನ್ನೂ ವಿಚಾರಣೆ ಆರಂಭಿಸಿಲ್ಲ ಎಂದು ಆಕ್ಷೇಪಿಸಿದರು.
ಇದಕ್ಕೆ ನ್ಯಾಯಪೀಠ ಸರಕಾರಿ ವಕೀಲರಿಂದ ಪ್ರತಿಕ್ರಿಯೆ ಬಯಸಿತು. ಆಗ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಆದಿತ್ಯ ಸೋಂಧಿ ಅವರು, ಈ ಕುರಿತ ದಾಖಲೆಗಳು ಸುಮಾರು 4,500 ಪುಟಗಳಷ್ಟಿವೆ. ಇವುಗಳಲ್ಲಿ ಬಹಳಷ್ಟು ಭಾಷಾಂತರ ಆಗಬೇಕಿದೆ. ಹೀಗಾಗಿ ತಡವಾಗುತ್ತಿದೆ ಎಂದು ವಿವರಿಸಿದರು.
ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಲಾಗಿದೆ.







