ಕೊಡವರಿಗೆ ಸ್ವಾಯತ್ತತೆ ನೀಡಲು ಆಗ್ರಹ
ಬೆಂಗಳೂರು, ಅ.31: ಕೊಡವರಿಗೆ ಸ್ವಾಯತ್ತತೆ ನೀಡಬೇಕು, ಬುಡಕಟ್ಟು ಕೊಡವರನ್ನು ಸಂವಿಧಾನದ ಪರಿಚ್ಛೇದ 340,342 ಅಡಿಯಲ್ಲಿ ಶೆಡ್ಯೂಲ್ ಪಟ್ಟಿಗೆ ಸೇರಿಸಬೇಕು ಹಾಗೂ ಕೊಡವ ಭಾಷೆಯನ್ನು ಸಂವಿಧಾನದ 8ನೆ ಅನುಶ್ಛೇದನಕ್ಕೆ ಸೇರಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೌನ್ಸಿಲ್ ಅಧ್ಯಕ್ಷ ಸಿ.ಎನ್.ಸಿ.ನಾಚಪ್ಪ, ಈ ಹಿಂದೆ ಕೊಡಗು ಬೇರೆ ರಾಜ್ಯವಾಗಿತ್ತು. ಅದನ್ನು ಮೈಸೂರು ಸಂಸ್ಥಾನದ ಜತೆ ವಿಲೀನ ಮಾಡಿ, ನಂತರ ಕರ್ನಾಟಕ ರಾಜ್ಯವನ್ನಾಗಿ ಮಾಡಿದರು. ಅನಂತರದಿಂದ ಕೊಡವರ ಎಲ್ಲ ಹಕ್ಕುಗಳನ್ನು ಹಂತ ಹಂತವಾಗಿ ಕಸಿಯುತ್ತಾ ನಮ್ಮ ನೆಲದ ಎಲ್ಲ ಸಂಪನ್ಮೂಲಗಳನ್ನು ಕಬಳಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಪ್ರತ್ಯೇಕ ರಾಜ್ಯವಾಗಿದ್ದ ಕೊಡಗನ್ನು ಕರ್ನಾಟಕಕ್ಕೆ ಸೇರಿಸಿ, ಅಲ್ಲಿನ ಜನರಿಗೆ ಹಾಗೂ ಸಂಸ್ಕೃತಿಗೆ ಅನ್ಯಾಯ ಎಸಗಿದ್ದಾರೆ. ಹೀಗಾಗಿ, ಕೊಡವರು ಕನ್ನಡ ರಾಜ್ಯೋತ್ಸವ ಆಚರಿಸುವುದರ ಬದಲಿಗೆ, ಸ್ವಾಯತ್ತತೆಗೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ನ.1 ರಂದು ದಿಲ್ಲಿ ಚಲೋ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೊಡವರನ್ನು ಹೊಸಾಹತು ಆಗಿ ರಾಜ್ಯ ಸರಕಾರ ಪರಿಗಣಿಸಿಲ್ಲ. ಅಲ್ಲಿ ಬೇರೆ ಭಾಷೆಯವರೇ ಹೆಚ್ಚು ನೆಲೆಯೂರಿದ್ದಾರೆ. ಐಎಸ್‌ಐಎಸ್‌ನಂತಹ ಉಗ್ರಸಂಘಟನೆಗೆ ಸರಕಾರ ಬೆಂಬಲ ನೀಡುತ್ತಿದೆ. ಸರಕಾರ ಕೊಡವರನ್ನು ನಿರ್ನಾಮ ಮಾಡಲು ಯತ್ನಿಸುತ್ತಿದ್ದಾರೆ. ಅದಕ್ಕೆ ತಾವು ಅವಕಾಶ ಕಲ್ಪಿಸುವುದಿಲ್ಲ ಎಂದು ಹೇಳಿದರು.







