ಬಾಲಕಿ ಆತ್ಮಹತ್ಯೆ: ಕಿರುಕುಳ ಆರೋಪ
ಬೆಂಗಳೂರು, ಅ.31: ನೃತ್ಯ ತರಬೇತಿ ಕೇಂದ್ರದಲ್ಲಿ ಅಪ್ರಾಪ್ತ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕ ಉಪನಗರದ ಅಟ್ಟೂರು ಲೇಔಟ್‌ನ ನೃತ್ಯ ತರಬೇತಿ ಕೇಂದ್ರದಲ್ಲಿ ಸೋಮವಾರ ರಾತ್ರಿ ಚಂದನಾ (12) ಎಂಬಾಕೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಟ್ಟೂರಿನ ನಿವಾಸಿ ಆಟೊ ಚಾಲಕ ಕುಮಾರ್ ಎಂಬವರ ಪುತ್ರಿ ಚಂದನಾ ನಗರದ ವಿದ್ಯಾರಣ್ಯಪುರದ ವಿದ್ಯಾನಿಕೇತನ ಶಾಲೆಯಲ್ಲಿ 6ನೆ ತರಗತಿ ವ್ಯಾಸಂಗ ಮಾಡುತ್ತಿದ್ದಳು. ನೃತ್ಯ ಕಲಿಕೆಗಾಗಿ ಆಕೆ ಕೆಲ ತಿಂಗಳುಗಳಿಂದ ಭದ್ರಿನಾಥ್ ಎಂಬುವರಿಗೆ ಸೇರಿದ ನೃತ್ಯ ತರಬೇತಿ ಕೇಂದ್ರಕ್ಕೆ ಹೋಗುತ್ತಿದ್ದಳು ಎನ್ನಲಾಗಿದೆ.
ಸೋಮವಾರ ರಾತ್ರಿ ತಲೆಹೇನು ನಿವಾರಣೆ ತೈಲವನ್ನು ನೃತ್ಯ ತರಬೇತಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಯಾರಿಗೂ ಗೊತ್ತಾಗದಂತೆ ಅಲ್ಲಿನ ಶೌಚಾಲಯದಲ್ಲಿ ಆ ತೈಲ ಕುಡಿದು ಸಹಪಾಠಿಗಳ ಜತೆ ನೃತ್ಯ ಮಾಡಿದ್ದಳು. ಆಗ ವಾಂತಿ ಮಾಡಿಕೊಂಡು ಕುಸಿದು ಬಿದ್ದಳು ಎಂದು ತಿಳಿದು ಬಂದಿದೆ.
ಬಳಿಕ ಆಕೆಯನ್ನು ಯಲಹಂಕ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.
ಕಿರುಕುಳ ಆರೋಪ: ನೃತ್ಯಗಾರ ಭದ್ರಿನಾಥ್ ಅವರ ಸಹಾಯಕ ಸತೀಶ್ ಎಂಬುವರು ಆಕೆಗೆ ಕಿರುಕುಳ ನೀಡುತ್ತಿದ್ದು, ಇದರಿಂದಾಗಿ ನೊಂದ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ತನಿಖೆಯನ್ನು ತೀವ್ರಗೊಳಿಸುತ್ತೇವೆ ಪೊಲೀಸರು ಮಾಹಿತಿ ನೀಡಿದ್ದಾರೆ.







