ಬೆಂಗಳೂರು: ನ.1ರಂದು ಕನ್ನಡ ರಾಜ್ಯೋತ್ಸವ, ಮಕ್ಕಳ ಸಮಾರಂಭ
ಬೆಂಗಳೂರು, ಅ.31: ಸಾರ್ವಜನಿಕ ಶಿಕ್ಷಣ ಇಲಾಖೆಯು ನ.1ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ಮೇಳ ಸಮಾರಂಭವನ್ನು ನ.1ರಂದು ಬೆಳಗ್ಗೆ 9 ಗಂಟೆಗೆ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ಮಾಡಿ, ರಾಜ್ಯೋತ್ಸವ ಸಂದೇಶವನ್ನು ನೀಡಲಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಯಕ್ರಮವನ್ನು ಸಾದರಪಡಿಸುತ್ತಿದ್ದು, 80 ಶಾಲೆಗಳ ಒಟ್ಟು 9 ಸಾವಿರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕನ್ನಡ ನಾಡು, ನುಡಿ, ನೆಲ, ಜಲ, ದೇಶಾಭಿಮಾನಕ್ಕೆ ಸಂಬಂಧಿಸಿದ ನೃತ್ಯ ರೂಪಕಗಳು, ಸಾಮೂಹಿಕ ಕವಾಯತು ಹಾಗೂ ಯೋಗ ಪ್ರದರ್ಶನವನ್ನು ನಡೆಸಿಕೊಡುವರು.
ಯುವ ಜನಾಂಗದ ಅಭಿವೃದ್ಧಿಯ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗುವ ಭಾರತೀಯ ಮೂಲದ ಸೂಪರ್‌ಬ್ರೈನ್ ಯೋಗವನ್ನು ಶಿಕ್ಷಣ ಇಲಾಖೆಯು ಪರಿಚಯಿಸಿ ಅಳವಡಿಸುವ ಮಹತ್ವದ ಕಾರ್ಯಕ್ಕೆ ಚಾಲನೆ ದೊರೆತಿರುವುದು ದೇಶದಲ್ಲಿಯೇ ಮೊದಲು.
ರಾಜ್ಯ ಸರಕಾರವು ಈ ಯೋಗವನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಂಬಲಿಸುತ್ತಿರುವುದು ಯುವ ಜನಾಂಗಕ್ಕೆ ನೀಡುತ್ತಿರುವ ರಾಜ್ಯೋತ್ಸವದ ವಿಶೇಷ ಕೊಡುಗೆಯಾಗಿದೆ. ಈ ಕಾರ್ಯಕ್ರಮಗಳಲ್ಲಿ ಸಾರ್ವತ್ರಿಕವಾಗಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲದಲ್ಲಿ ಪ್ರಾಯೋಗಿಕ ಅಭ್ಯಾಸದ ಮೂಲಕ ಚಾಲನೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ಇಲಾಖೆಯವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಕನ್ನಡ ರಾಜ್ಯೋತ್ಸವಕ್ಕೆ-ಚಿತ್ರಕಲಾ ಉತ್ಸವ: ಮುಖ್ಯಮಂತ್ರಿಯ ಮಾರ್ಗದರ್ಶನದಂತೆ, ನಾಡಿನ ಖ್ಯಾತ ಕಲಾವಿದರು ಕನ್ನಡದ ಕುರಿತ ಚಿತ್ರ ಕಲಾಕೃತಿಗಳು, ಮಕ್ಕಳಿಗೆ ಮಾರ್ಗದರ್ಶನ ಹಾಗೂ ಕನ್ನಡ ವಾತಾವರಣದ ಅನಾವರಣವನ್ನು ಕಲಾಕೃತಿಗಳ ಮೂಲಕ ಮಾಡಿರುವುದು ಈ ಬಾರಿಯ ವಿಶೇಷತೆಯಾಗಿದೆ. ಅನೇಕ ಕನ್ನಡ ಶಾಲೆಯ ಮಕ್ಕಳು ಮತ್ತು ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟನೆ ತಿಳಿಸಿದೆ.







