ಕನಕ ಭವನ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಬಿಡುಗಡೆ: ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ, ಅ.31: ಜಿಲ್ಲಾ ಕೇಂದ್ರದಲ್ಲಿ ಕನಕ ಭವನ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ತಾಲೂಕಿನ ಮಂಚನಬಲೆಯಲ್ಲಿ ಶ್ರೀ ಬೀರೆಶ್ವರ, ಶ್ರೀ ಆನೇ ದೇವರು, ಚೌಡೇಶ್ವರಿ ಮತ್ತು ಶ್ರೀ ಸಿದ್ದೇ ದೇವರುಗಳ ನೂತನ ಶಿಲಾ ಮೂರ್ತಿಗಳ ಸ್ಥಿರ ಬಿಂಬಾ ಪ್ರತಿಷ್ಠಾಪನ ಶಿಖರ, ಕಳಸ ಪ್ರತಿಷ್ಠಾಪನ, ಮಹಾಕುಂಬಾಭೀಷೇಕ ಮತ್ತು ನೂತನ ದೇವಾಲಯ ಉದ್ಘಾಟನೆ ಮತ್ತು ಲೋಕಾರ್ಪಣೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರದಲ್ಲಿ ಕನಕ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲು ಸಲ್ಲಿಸಿದ ಮನವಿ ಕುರಿತು ಭಾಷಣದ ಸಂದರ್ಭದಲ್ಲಿ ಶಾಸಕ ಡಾ.ಕೆ. ಸುಧಾರಕ್ ಅವರು ಗಮನ ಸೆಳೆದಾಗ, ಶೀಘ್ರದಲ್ಲಿಯೇ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಅನಾದಿ ಕಾಲದಿಂದಲೂ ದೇವಸ್ಥಾನಗಳನ್ನು ನಿರ್ಮಿಸಿ, ಇಷ್ಟ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪ್ರಾರ್ಥನೆ ಮಾಡುವಂತಹ ಸಂಪ್ರದಾಯ ಅನೇಕ ವರ್ಷಗಳಿಂದ ಬಂದಿದೆ. ಇಂದಿಗೂ ವಿವಿಧ ಹೆಸರಿನಲ್ಲಿ ದೇವರು ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಧರ್ಮ, ಜಾತಿ ಹೆಸರಲ್ಲಿ ಬೇರೊಬ್ಬರನ್ನು ನಿಂದಿಸುವುವರು ಮನುಷ್ಯರಾಗಿರುವುದಿಲ್ಲ. ತಪ್ಪು ಕಲ್ಪನೆಗಳನ್ನು ಮಾಡಿಕೊಂಡವರು ಇತರರನ್ನು ನಿಂದಿಸುತ್ತಾರೆ. ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದರು.
ಈ ಸಮದರ್ಭದಲ್ಲಿ ಸಂಸದರಾದ ವೀರಪ್ಪಮೊಯ್ಲಿ, ಕೆ.ಎಚ್. ಮುನಿಯಪ್ಪ, ಶಾಸಕ ಡಾ. ಕೆ.ಸುಧಾಕರ್, ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ನಾಗರಾಜು, ಜಿಪಂ ಅಧ್ಯಕ್ಷ ಕೇಶವರೆಡ್ಡಿ, ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ವರ್ತೂರ್ ಪ್ರಕಾಶ್, ಮಾಜಿ ಚಿಕ್ಕಬಳ್ಳಾಪುರ ಶಾಸಕ ಬಚ್ಚೇಗೌಡ, ಮಾಜಿ ಸಚಿವ ವಿ.ಮುನಿಯಪ್ಪ, ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾತೀಕ್ ರೆಡ್ಡಿ, ಗಂಗರೇಕಾಲುವೆ ನಾರಾಯಣ ಸ್ವಾಮಿ, ದೇವಾಲಯದ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ಬೀರಪ್ಪ, ಅಧ್ಯಕ್ಷ ಪಿ. ಹನುಮಂತಪ್ಪ ಮಂಚನಬಲೆ ಶ್ರೀಧರ್ ಸೇರಿದಂತೆ ಮತ್ತಿತರರು ಇದ್ದರು.







