ನ. 7ರ ಒಳಗೆ ಪಾಟಿದಾರ್ ಮೀಸಲಾತಿಗೆ ಸ್ಪಷ್ಟತೆ ನೀಡಿ: ಹಾರ್ದಿಕ್ ಪಟೇಲ್

ಅಹ್ಮದಾಬಾದ್, ಅ. 31: ತನ್ನ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಂತೆ ನವೆಂಬರ್ 7ರ ಒಳಗೆ ಸ್ಪಷ್ಟತೆ ನಿರೀಕ್ಷಿಸುವುದಾಗಿ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಮುಂಬರುವ ಗುಜರಾತ್ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಪಾಟಿದಾರ್ ಸಮುದಾಯದ ಮೊದಲ ಔಪಚಾರಿಕ ಸಭೆ ನಡೆದ ಗಂಟೆಗಳ ಬಳಿಕ ಹಾರ್ದಿಕ್ ಪಟೇಲ್ ಈ ಹೇಳಿಕೆ ನೀಡಿದ್ದಾರೆ.
“ನಾನು ಯಾರೊಂದಿಗೂ ಇಲ್ಲ, ಯಾರ ವಿರುದ್ಧವೂ (ಕಾಂಗ್ರೆಸ್) ಇಲ್ಲ. ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಂತೆ ನವೆಂಬರ್ 7ರ ಒಳಗೆ ಸ್ಪಷ್ಟತೆ ದೊರೆಯುವ ಅಗತ್ಯತೆ ಇದೆ” ಎಂದು ಅವರು ಹೇಳಿದ್ದಾರೆ.
ಪಾಟಿದಾರ್ ಸಮುದಾಯದ ಮೀಸಲಾತಿ ಆಗ್ರಹದ ಕುರಿತ ನಿಲುವನ್ನು ಸ್ಪಷ್ಟಪಡಿಸಲು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಗಡುವನ್ನು ನವೆಂಬರ್ 7ರ ವರೆಗೆ ಹಾರ್ದಿಕ್ ಪಟೇಲ್ ವಿಸ್ತರಿಸಿದ್ದರು.
ಕಾಂಗ್ರೆಸ್‌ನೊಂದಿಗಿನ ಸಭೆಯಲ್ಲಿ ಪಾಟಿದಾರ್ ನಾಯಕರು ತಮ್ಮ ಆಗ್ರಹದ ಪಟ್ಟಿಯನ್ನು ಮುಂದಿಟ್ಟಿದ್ದಾರೆ. ಇದರಲ್ಲಿ ನಾಲ್ಕು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಆದರೆ, ಪಾಟಿದಾರ್ ಮೀಸಲಾತಿ ಆಗ್ರಹದ ಬಗ್ಗೆ ಅಂತಿಮ ನಿರ್ಣಯಕ್ಕೆ ತಲುಪಲು ಸಾಧ್ಯವಾಗಿಲ್ಲ.
ಅದೇನೆ ಇದ್ದರೂ ಸಭೆ ಫಲಪ್ರದವಾಗಿದೆ. ಪಿಎಎಎಸ್‌ನ ಕೋರ್ ಸಮಿತಿ ಸೂಚಿಸಿದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಾಗುವುದು ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಈ ನಡುವೆ ಕಾಂಗ್ರೆಸ್, ಈ ವಿಷಯವನ್ನು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದೆ.
ಪಿಎಎಎಸ್ ತನ್ನ ಬೇಡಿಕೆಗಳನ್ನು ಮುಂದಿಟ್ಟಿದೆ. ನಾವು ಈ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಗುಜರಾತ್ ರಾಜ್ಯಾಧ್ಯಕ್ಷ ಭರತ್ ಸಿನ್ಹಾ ಸೋಲಂಕಿ ತಿಳಿಸಿದ್ದಾರೆ.







