“ಪುಲ್ಕಿಸ್ತಾ, ಸುಮಿತಾ, ದುಮಾಲ್ ಸುನಾಮಿ”: ಬಿಜೆಪಿ ನಾಯಕನ ಹೊಸ ‘ವಂದೇ ಮಾತರಂ’
ಇದನ್ನು ಕೇಳಿದರೆ ಮನೋರಂಜನೆ ಉಚಿತ, ನಗು ಖಚಿತ!

ಹೊಸದಿಲ್ಲಿ, ಅ.31: ಒಂದೆಡೆ ಬಿಜೆಪಿ ನಾಯಕರು ವಂದೇಮಾತರಂ ಕಡ್ಡಾಯಕ್ಕೆ ಪಟ್ಟು ಹಿಡಿಯುತ್ತಲೇ ಇದ್ದಾರೆ. ಇನ್ನೊಂದೆಡೆ ಅದೇ ಪಕ್ಷದ ನಾಯಕರು ವಂದೇಮಾತರಂ ಹಾಡಿನ ಒಂದೇ ಒಂದು ಸಾಲನ್ನು ಹಾಡಲಾಗದೆ ಅಥವಾ ತಪ್ಪುತಪ್ಪಾಗಿ ಹಾಡಿ ನಗೆಪಾಟಲಿಗೀಡಾಗುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆಯೆಂದರೆ ಬಿಜೆಪಿ ವಕ್ತಾರ ನವೀನ್ ಕುಮಾರ್.
ಇತ್ತೀಚೆಗೆ ‘ಝೀ ಸಲಾಮ್ ಚಾನೆಲ್’ನಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಚರ್ಚೆ ನಡೆಯುತ್ತಿದ್ದ ಸಂದರ್ಭ ಬಿಜೆಪಿ ವಕ್ತಾರ ನವೀನ್ ಕುಮಾರ್ ಅವರಿಗೆ ವಂದೇ ಮಾತರಂ ಹಾಡುವಂತೆ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನ ಸದಸ್ಯ ಮುಫ್ತಿ ಎಜಾಝ್ ಸವಾಲು ಹಾಕಿದ್ದಾರೆ.
ಆದರೆ ಈ ಸವಾಲಿಗೆ ಪ್ರತಿಕ್ರಿಯಿಸಲು ಹೋದ ನವೀನ್ ಕುಮಾರ್ ವಂದೇ ಮಾತರಂ ಹಾಡಿನ ಸಾಹಿತ್ಯವನ್ನು ಮೊಬೈಲ್ ನಲ್ಲಿ ವೀಕ್ಷಿಸುತ್ತಾ ತಪ್ಪುತಪ್ಪಾಗಿ ಹಾಡಿ ನಗೆಪಾಟಲಿಗೀಡಾಗಿದ್ದಾರೆ. ನವೀನ್ ಕುಮಾರ್ ರ ವಂದೇ ಮಾತರಂ ಈ ಕೆಳಗಿನಂತಿದೆ.
ವಂದೇ ಮಾತರಂ
ಸುಜಲಾಂ ಸುಫಲಾಂ
ಮಲಯಜ ಶೀತಲಂ
ಸನ್ಸಯಾಮ್
ಮಲ್ಯಾಮ್
ಸುಭ್ರತ್ ಜೋತ್ಸಂ
ಪುಲ್ಕಿತ್ ಯಾಮ್
ವಂದೇ ಮಾತರಂ
ಪುಲ್ಕಿಸ್ತಾ
ಸುಮಿತಾ
ದುಮಾಲ್ ಸುನಾಮಿ (?)
ಸುಹಾಸಿನ್
ಸುಮಂತ್ರ ಬುಲ್ಶುಮಾನಿ
ವಂದೇ ಮಾತರಂ…….
ಝೀ ಸಲಾಮ್ ಪ್ರಸಾರ ಮಾಡುತ್ತಿದ್ದಂತೆಯೇ ಈ ವಿಡಿಯೋ ವೈರಲ್ ಆಗಿದೆ. ಬಿಜೆಪಿ ವಕ್ತಾರನ ವಂದೇ ಮಾತರಂ ಹಾಡು ಕಾಲೆಳೆಯುವ ಟ್ವಿಟರಿಗರಿಗೆ ಹಬ್ಬದೂಟದಂತಾಗಿದೆ. ಬಿಜೆಪಿ ವಕ್ತಾರ ನವೀನ್ ಕುಮಾರ್ ರನ್ನು ಟ್ವಿಟರಿಗರು ವಿವಿಧ ರೀತಿಯಲ್ಲಿ ಟ್ರೋಲ್ ಮಾಡಿದ್ದಾರೆ.
ಬಿಜೆಪಿ ನಾಯಕರು ವಂದೇಮಾತರಂ ವಿಚಾರದಲ್ಲಿ ಮುಜುಗರಕ್ಕೀಡಾಗುತ್ತಿರುವುದು ಇದು ಮೊದಲನೆ ಬಾರಿಯೇನಲ್ಲ. ಈ ಹಿಂದೆ ‘ಇಂಡಿಯಾ ಟುಡೆ’ ಚಾನೆಲ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲೂ ಉತ್ತರ ಪ್ರದೇಶ ಸಚಿವ ಬಲ್ದೇವ್ ಸಿಂಗ್ ಕೂಡ ಇದೇ ರೀತಿ ಮುಜುಗರಕ್ಕೀಡಾಗಿದ್ದರು. ಕಾರ್ಯಕ್ರಮದ ಆ್ಯಂಕರ್ ವಂದೇಮಾತರಂ ಅನ್ನು ಹಾಡುವಂತೆ ಹಲವು ಬಾರಿ ಹೇಳಿದ್ದರೂ ಒಂದೇ ಒಂದು ಸಾಲನ್ನೂ ಹಾಡಲಾಗದೆ ಬಲ್ದೇವ್ ಸಿಂಗ್ ನಗೆಪಾಟಲಿಗೀಡಾಗಿದ್ದರು.







