ರಾಜ್ಯದಲ್ಲಿ ನರೇಂದ್ರ ಮೋದಿ ರ್ಯಾಲಿ ನಡೆಸಿದರು ಜನರ ಮನಸ್ಥಿತಿ ಪರಿವರ್ತನೆ ಆಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ, ಅ.31: ನ.2 ರಂದು ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪರಿವರ್ತನಾ ರ್ಯಾಲಿಯಿಂದ ರಾಜ್ಯದ ಜನರ ಮನಸ್ಥಿತಿ ಪರಿವರ್ತನೆ ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾಗರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಅಮಿತ್ ಶಾ ಬರಲಿ, ಪ್ರಧಾನಿ ನರೇಂದ್ರ ಮೋದಿ ಬರಲಿ ಯಾರು ಬಂದು ರ್ಯಾಲಿ ಮಾಡಿದರೂ, ಜನರ ಮನಸ್ಥಿತಿ ಪರಿವರ್ತನೆ ಆಗುವುದಿಲ್ಲ ಹಾಗೂ ಪರಿವರ್ತಿಸಲು ಸಾಧ್ಯವಿಲ್ಲ ಎಂದರು.
ಮೋದಿ ರಾಜ್ಯಕ್ಕೆ ಬಂದ ಮಾತ್ರಕ್ಕೆ ಜನರ ಮನಸ್ಥಿತಿ ಬದಲಾವಣೆಯಾಗಲು ಯಾವುದಾದರೂ ಸೂಕ್ತ ಕಾರಣ ಬೇಕಲ್ಲ. ರ್ಯಾಲಿ ನಡೆಸಿದ ಮಾತ್ರಕ್ಕೆ ಜನರನ್ನು ಪರಿವರ್ತಿಸಲು ಅವರೇನು ಜಾದೂಗಾರರೇ ಎಂದು ಪ್ರಶ್ನಿಸಿದ ಅವರು, ಕಳೆದ ಬಾರಿ ರಾಜ್ಯದಲ್ಲಿ ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿಗರು ಏಕೆ ಜನರನ್ನು ಪರಿವರ್ತನೆ ಮಾಡಲಿಲ್ಲ. ಜನರ ಪರಿವರ್ತನೆ ಮಾಡುವ ಬದಲು ಬಿಜೆಪಿಗರೇ ಪರಿವರ್ತನೆಯಾಗಬೇಕು ಎಂದು ವ್ಯಂಗ್ಯವಾಡಿದರು.
ರೈಲ್ವೆ ಯೋಜನೆ ಕೇಂದ್ರದ ಜವಾಬ್ದಾರಿ: ರೈಲ್ವೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಸಹಕರಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ರೈಲ್ವೆ ಯೋಜನೆ ಸಂಪೂರ್ಣ ಕೇಂದ್ರ ಸರ್ಕಾರದಲ್ಲಿ ವ್ಯಾಪ್ತಿಯಲ್ಲಿ ಬರುತ್ತದೆ. ಕೇಂದ್ರ ಹಿಂದಿನ ಸರ್ಕಾರದಲ್ಲಿ ರೈಲ್ವೆ ಸಚಿರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲೇ, ಹುಮ್ನಾಬಾದ್ ಬೀದರ್ ರೈಲ್ವೆ ಯೋಜನೆ ಉದ್ಘಾಟನೆಯಾಗಿತ್ತು. ಯೋಜನೆಯ ಭಾಗವಾಗಿ ಕಾಮಗಾರಿಯ ಒಟ್ಟು ಖರ್ಚಿನಲ್ಲಿ ಶೇ.50 ರಷ್ಟು ರಾಜ್ಯ ಸರ್ಕಾರ ಅನುದಾನ ಹಾಗೂ ಸ್ಥಳ ಕೂಡ ರಾಜ್ಯ ಸರ್ಕಾರ ಉಚಿತವಾಗಿ ನೀಡಿದೆ ಎಂದರು.
ಪಾನ ನಿಷೇಧ ಯಶಸ್ವಿ ಕಂಡಿಲ್ಲ: ಮದ್ಯ ನಿಷೇಧಿಸಬೇಕೆಂಬ ಕೂಗು ಬಹಳ ಹಿಂದಿನಿಂದಲೂ ಕೇಳಿ ಬಂದಿದೆ. ಆದರೇ ಯಾವ ರಾಜ್ಯದಲ್ಲೂ ಪಾನ ನಿಷೇಧ ಯಶಸ್ವಿಯಾಗಿಲ್ಲ ಎಂದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಕ್ರಮ ಕಲ್ಲಿದ್ದಲು ಹಗರಣ ನಡೆದಿರುವ ಬಗ್ಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯ ಸದನ ಸಮಿತಿ ರಚನೆಯಾಗಿದ್ದು, ಸಮಿತಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರೂ ಸಹ ಸದಸ್ಯರಾಗಿದ್ದಾರೆ. ಅಕ್ರಮದ ಬಗ್ಗೆ ತನಿಖೆ ನಡೆಸುವ ಸಮಿತಿ ಸದನಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಸಚಿವ ರೇವಣ್ಣ, ಶಾಸಕ ಸುಧಾಕರ್ ಸೇರಿದಂತೆ ಮತ್ತಿತರರು ಇದ್ದರು.







