ಮನೆ-ಮನೆಗೆ ಕಾಂಗ್ರೆಸ್ ಅಭಿಯಾನದಿಂದ ಬಿಜೆಪಿಯವರಿಗೆ ನಡುಕ ಉಂಟಾಗಿದೆ: ಪರಮೇಶ್ವರ್
.jpg)
ಮೈಸೂರು, ಅ.31: ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿಯನ್ನು ಬಡಿದು ಹಾಕಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‍ನಲ್ಲಿ ಮನೆ-ಮನೆಗೆ ಕಾಂಗ್ರೆಸ್ ಪರಿಶೀಲನಾ ಕಾರ್ಯಕ್ರಮದ ಬಗ್ಗೆ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮನೆ-ಮನೆಗೆ ಕಾಂಗ್ರೆಸ್ ನಡಿಗೆ ಕಂಡು ಬಿಜೆಪಿಯವರಿಗೆ ನಡುಕ ಉಂಟಾಗಿದೆ. ಬಿಜೆಪಿಯವರಿಗೆ ಪರಿವರ್ತನಾ ರ್ಯಾಲಿಯ ಅಗತ್ಯವಿರಲಿಲ್ಲ, ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ನಾಯಕರನ್ನು ಪಕ್ಷ ಸಂಘಟನೆ ದೃಷ್ಟಿಯಿಂದ ನೀವು ಯಾವ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ ಎಂದು ಕೇಳಿದ್ದಾರೆ. ಯಾವುದೇ ಕಾರ್ಯಕ್ರಮ ಹಾಕಿಕೊಂಡಿಲ್ಲ ಎಂದು ಸ್ಥಳೀಯ ಬಿಜೆಪಿಯವರು ತಿಳಿಸಿದ ನಂತರ ಪರಿವರ್ತನಾ ರ್ಯಾಲಿ ನಡೆಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಬಿಜೆಪಿಯವರು ಕಳೆದ 6 ತಿಂಗಳಿನಿಂದ ಮನೆ ಮನೆಗಳಿಗೆ ತೆರಳಿ ಸದ್ದಿಲ್ಲದೆ ನಮಗಿಂತ ಹತ್ತರಷ್ಟು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ನಾವು ಜಾಗೃತರಾಗಿ ರಾಜ್ಯದ ಜನತೆಗೆ ನಮ್ಮ ಸರ್ಕಾರದ ಸಾಧನೆ, ಪಕ್ಷದ ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕು. ಜತೆಗೆ 2018ರ ಚುನಾವಣೆ ಮುಗಿಯುವವರೆಗೆ ಬೂತ್ ಕಮಿಟಿ ಸದಸ್ಯರು ವಿರಮಿಸಬಾರದು ಎಂದರು.
ನಮ್ಮ ನಾಯಕ ರಾಹುಲ್ ಗಾಂಧಿ ಸೂಚನೆ ಮೇರೆಗೆ ಮನೆ-ಮನೆಗೆ ಕಾಂಗ್ರೆಸ್ ನಡಿಗೆ ಎಂಬ ಯೋಜನೆಯೊಂದಿಗೆ ಜನರ ಮನಸ್ಸನ್ನು ಮುಟ್ಟುವ ಕೆಲಸವನ್ನು ಪಕ್ಷ ಮಾಡುತ್ತಿದೆ. ರಾಜ್ಯದಲ್ಲಿ 54261 ಬೂತ್‍ಗಳಿದ್ದು, ಒಂದು ಬೂತ್‍ಗೆ ಕನಿಷ್ಠ 13 ಜನರ ತಂಡವನ್ನು ರಚಿಸಿ ಈಗಾಗಲೇ 51 ಸಾವಿರ ಬೂತ್‍ಗಳನ್ನು ರಚನೆ ಮಾಡಿ ಕೆಲಸಮಾಡುತ್ತಿದ್ದೇವೆ. ದೇಶದಲ್ಲೇ ಪ್ರಪ್ರಥಮ ಬಾರಿಗೆ 6.5 ಲಕ್ಷ ಕಾರ್ಯಕರ್ತರನ್ನು ಏಕಕಾಲಕ್ಕೆ ನೊಂದಣಿ ಮಾಡಲಾಗಿದೆ ಎಂದು ತಿಳಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೂತ್ ಸಮಿತಿಯ ಸದಸ್ಯರು ಮನೆ-ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದ ಪ್ರಗತಿ ಬಗ್ಗೆ ಪ್ರತಿಯೊಂದು ಬೂತ್ ಕಮಿಟಿ ಅಧ್ಯಕ್ಷರಿಂದ ಮಾಹಿತಿ ಪಡೆದರು.
ಪರಮೇಶ್ವರ್ ಗರಂ: ಮಧ್ಯಾಹ್ನ ಒಂದು ಗಂಟೆಗೆ ನಿಗಧಿಯಾಗಿದ್ದ ಕಾರ್ಯಕ್ರಮಕ್ಕೆ ಗಣ್ಯರು ಮೂರು ಗಂಟೆ ತಡವಾಗಿ ಆಗಮಿಸಿದರು. ಖಾಸಗಿ ಹೋಟೆಲ್‍ನ ಒಳಗೆ ಹೋಗುತ್ತಿದ್ದಂತೆ ಕಾರ್ಯಕರ್ತರು ಅವರನ್ನು ಮುತ್ತಿಕೊಂಡು ಹಾರ ಹಾಕಲು ಮುಗಿಬಿದ್ದರು. ಇದರಿಂದ ಕಸಿವಿಸಿಗೊಂಡ ಪರಮೇಶ್ವರ್, ಕಾರ್ಯಕರ್ತರಿಗೆ ಶಿಸ್ತಿನಿಂದ ವರ್ತಿಸುವಂತೆ ಗದರಿದರು.
ಸಭೆ ಆರಂಭವಾಗುತ್ತಿದ್ದಂತೆ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡು ನಿಮ್ಮ ಪೌರಷವನ್ನು ಇಲ್ಲಿತೋರಿಸುವುದಕ್ಕಿಂತ ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ತೋರಿಸಿ, ಮುಂದೆ ಇಂತಹ ಘಟನೆ ಮರುಕಳಿಸಿದರೆ ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಕ್ರಮ ಜರಗಿಸಬೇಕಾಗುತ್ತದ ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಧ್ರುವನಾರಾಯಣ, ಶಾಸಕರಾದ ಕೆ.ವೆಂಕಟೇಶ್, ಮಂಜುನಾಥ್, ಕಳಲೆ ಕೇಶವಮೂರ್ತಿ, ವಾಸು, ವರುಣ ಜಾಗೃತಿ ಸಮಿತಿ ಅಧ್ಯಕ್ಷ ಯತೀಂದ್ರ ಸಿದ್ಧರಾಮಯ್ಯ, ಕಾಂಗ್ರೆಸ್ ಮೈಸೂರು ಉಸ್ತುವಾರಿ ವಿಷ್ಣುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ, ನಗರ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ನಗರಪಾಲಿಕೆ ಸದಸ್ಯ ದೇವರಾಜು, ಶೌಕತ್ ಅಲಿಖಾನ್, ಮಾಜಿ ಶಾಸಕಿ ಮುಕ್ತಾರುನ್ನೀಸ ಬೇಗಂ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಭಾಸ್ಕರ್ ಗೌಡ, ಶಿವಮಾದು ಸೇರಿದಂತೆ ಹಲವರು ಉಪಸ್ಥಿತರಿದ್ದರು.







