ಜನ ಸಂಪರ್ಕ, ರೈತರ ಬೆಳೆ ಸಮೀಕ್ಷೆ ‘ಮೊಬೈಲ್ ಆ್ಯಪ್‌ಗಳ’ ಲೋಕಾರ್ಪಣೆ
ಬೆಂಗಳೂರು, ಅ. 31: ಜನರ ಜತೆ ಸಂಪರ್ಕ ಸಾಧಿಸಲು ‘ದಿ ಸಿಟಿಜನ್ ಕನೆಕ್ಟ್’ ಹಾಗೂ ರೈತರ ಬೆಳೆ ಸಮೀಕ್ಷೆಗೆ ‘ಫಾರ್ಮರ್ಸ್ ಕ್ರಾಪ್ ಸರ್ವೇ’ ಎಂಬ ಹೆಸರಿನ ಎರಡು ಮೊಬೈಲ್ ಆ್ಯಪ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.
ಮಂಗಳವಾರ ಇಲ್ಲಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಆ್ಯಪ್ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಇದು ಡಿಜಿಟಲ್ ಯುಗ. ಪ್ರತಿಯೊಬ್ಬರ ಕಿಸೆಯಲ್ಲೂ ಮೊಬೈಲ್ ಎಂಬ ಸಂಪರ್ಕ ಸಾಧನ ಇದೆ. ಮೊಬೈಲ್ ಕೇವಲ ಸಂಭಾಷಣೆಯ ವಿನಿಮಯ ಮಾಡಿಕೊಳ್ಳುವ ಸಾಧನವಾಗಿ ಉಳಿದಿಲ್ಲ. ಬಹು ಉಪಯೋಗಿ ವೇದಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನದ ಮೂಲಕ ಸರಕಾರದ ವಿವಿಧ ಯೋಜನೆಗಳ ಕುರಿತ ಸಮಗ್ರ ಮಾಹಿತಿ ಜನರಿಗೆ ತಲುಪಿಸಿ, ಸಾರ್ವಜನಿಕರು ಪಾಲ್ಗೊಳ್ಳಲು ಅನುವಾಗುವಂತೆ ‘ದಿ ಸಿಟಿಜನ್ ಕನೆಕ್ಟ್ ಆ್ಯಪ್’ ರೂಪಿಸಲಾಗಿದೆ ಎಂದರು.
ಅದೇ ರೀತಿಯಲ್ಲೇ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ರೈತರಿಗೆ ಸರಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಕ್ಷಿಪ್ರವಾಗಿ ದೊರಕಿಸಿಕೊಡಲು ಫಾರ್ಮರ್ಸ್ ಕ್ರಾಪ್ ಸರ್ವೇ ಆ್ಯಪ್ ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಿಟಿಜನ್ ಕನೆಕ್ಟ್ ಆ್ಯಪ್: ಆರಂಭದಲ್ಲೇ ‘ಸಿಟಿಜನ್ ಕನೆಕ್ಟ್ ಆ್ಯಪ್’ನ ವೈಶಿಷ್ಟತೆಗಳನ್ನು ವಿವರಿಸಿದ ಸಿಎಂ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಆ್ಯಪ್ ಮೂಲಕ ಸರಕಾರದ ಯೋಜನೆಗಳು ಮತ್ತು ಸಾಧನೆಗಳ ಮಾಹಿತಿಯನ್ನು ತಿಳಿದು ಕೊಳ್ಳಬಹುದು. ಅಲ್ಲದೆ, ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ದಾಖಲಿಸಿ ಪರಿಾರವನ್ನು ಪಡೆದುಕೊಳ್ಳಬಹುದು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದು ಬಂದ ದಾರಿ ಹಾಗೂ ನವ ಕರ್ನಾಟಕ ನಿರ್ಮಾಣಕ್ಕೆ ಸಿಎಂ ಮುನ್ನೋಟವೇನು? ಎಂಬುದನ್ನು ರಾಜ್ಯದ ಜನರು ತಿಳಿಯಬಹುದು. ನಾಗರಿಕ ಸ್ನೇಹಿ ಆ್ಯಪ್ ಬಳಕೆದಾರರಿಗೆ ಸಿಎಂ ಕಚೇರಿಯ ತಾಜಾ ಸುದ್ದಿಗಳನ್ನು ನೀಡುತ್ತದೆ ಎಂದರು.
ಮುಖ್ಯಮಂತ್ರಿ ಬ್ಲಾಗ್, ಭಾಷಣಗಳು ಹಾಗೂ ಸಂದರ್ಶನಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಾಗರಿಕರು ಮುಖ್ಯಮಂತ್ರಿಯವರ ಕಚೇರಿಗೆ ನೇರವಾಗಿ ಇಲಾಖಾವಾರು ಸಮಸ್ಯೆಗಳ ಕುರಿತು ಅಭಿಪ್ರಾಯಗಳನ್ನು ತಿಳಿಸಬಹುದು. ಅಂತೆಯೇ, ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿ ದಾಖಲಿಸಬಹುದು ಎಂದ ಅವರು, ಯೋಜನೆಗಳನ್ನು ರೂಪಿಸುವುದು- ಅವುಗಳ ಪರಿಣಾಮಕಾರಿ ಅನುಷ್ಠಾನ ಆ್ಯಪ್‌ನ ಮೂಲ ಉದ್ದೇಶ. ಅಲ್ಲದೆ, ಜನರೊಂದಿಗೆ ಸಿಎಂ ನೇರವಾಗಿ ಸಂವಾದ ನಡೆಸಲು ಹಾಗೂ ಈ ಯೋಜನೆಗಳಲ್ಲಿ ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಲು ಈ ಆ್ಯಪ್‌ನಿಂದ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದರು.
ರಾಜ್ಯದ ಜನರಲ್ಲಿ ಸಬಲೀಕರಣಗೊಳಿಸಿ ಸಮಾಜವನ್ನು ಸಕಾರಾತ್ಮಕ ಪಥದಲ್ಲಿ ಕೊಂಡ್ಯೊಯಲಿದೆ. ಎಲ್ಲ ಇಲಾಖೆಗಳ ಬಗ್ಗೆಯೂ ನಾಗರಿಕರು ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಬಹುದು. ವ್ಯಕ್ತಿಚಿತ್ರ ವಿಭಾಗದಲ್ಲಿ ಸಿಎಂ ವಿಶಿಷ್ಟ ದೃಷ್ಟಿಯನ್ನು ಕಾಣಬಹುದು. ಸಿಎಂ ದಿನಚರಿ, ಆಡಳಿತದ ಕ್ರಮ, ಸಾಧನೆಗಳು ಹಾಗೂ ಅವುಗಳು ಜನರ ಜೀವನವನ್ನು ಹೇಗೆ ಉತ್ತಮಪಡಿಸುತ್ತಿವೆ ಎಂಬ ಮಾಹಿತಿ ಪಡೆಯಬಹುದು ಎಂದು ವಿವರಿಸಿದರು.
ಫಾರ್ಮರ್ಸ್ ಕ್ರಾಪ್ ಸರ್ವೆ ಆ್ಯಪ್: ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರಾಜ್ಯದ 2.7 ಕೋಟಿ ಹಿಡುವಳಿಗಳ ಬಗ್ಗೆ ಕಂದಾಯ ಅಥವಾ ಕೃಷಿ ಇಲಾಖೆಯಲ್ಲಿ ನಿಖರ ದಾಖಲೆಗಳಿಲ್ಲ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪರಿಹಾರ ಒದಗಿಸಬೇಕಾದರೆ ಮುಂಗಾರು ಹಾಗೂ ಹಿಂಗಾರು ಋತುಗಳಲ್ಲಿ ಮಾಡಿದ ಬಿತ್ತನೆ, ಬೆಳೆದ ಬೆಳೆ ಹೀಗೆ ಎಲ್ಲದರ ಪೂರ್ವ ಮಾಹಿತಿ ಸರಕಾರದಲ್ಲಿ ಇರಬೇಕಾಗುತ್ತದೆ. ರಾಜ್ಯದ ಪ್ರತೀ ಜಮೀನಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸುವ ಕಾರ್ಯವನ್ನು ಸರಕಾರವು ಈಗಾಗಲೇ ಹಮ್ಮಿಕೊಂಡಿದೆ. ಇದಕ್ಕಾಗಿ ಈಗಾಗಲೇ ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳ 15 ಸಾವಿರ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಜಿಪಿಎಸ್ ಕೋ-ಆರ್ಡಿನೇಟ್‌ಗಳೊಂದಿಗೆ ಜಮೀನಿನಲ್ಲಿ ಬೆಳೆದ ಬೆಳೆಗಳ ಅಧಿಕಾರಿಗಳು ವಿವರವನ್ನು ಸಂಗ್ರಹಿಸುತ್ತಾರೆ. ಅಲ್ಲದೆ, ಭೂ ಮಾಲಕರ ಆಧಾರ್ ವಿವರಗಳನ್ನು ಪಡೆಯುತ್ತಾರೆ. ಬೃಹತ್ ಪ್ರಮಾಣದ ಈ ದತ್ತಾಂಶ ಸಂಗ್ರಹಣಾ ಕಾರ್ಯಕ್ಕೆ ಮತ್ತಷ್ಟು ವೇಗ ಕಲ್ಪಿಸಲು ಹಾಗೂ ಕಾಲಮಿತಿಯೊಳಗೆ ಪೂರ್ಣಗೊಳಿಸಲು ರೈತರ ಬೆಳೆ ಸಮೀಕ್ಷೆಯ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇದು ಸಾಮಾನ್ಯವಾಗಿ ಬಳಸುವಬೆಳೆ ಸಮೀಕ್ಷೆಯ ಆ್ಯಪ್‌ನ ಸಂಕ್ಷಿಪ್ತ ರೂಪ. ಕೇವಲ ಅಧಿಕಾರಿ ಮತ್ತು ಸಿಬ್ಬಂದಿ ಮಾತ್ರವಲ್ಲ ರೈತರೂ ಈ ಆ್ಯಪ್ ಮೂಲಕ ತಮ್ಮ ಬೆಳೆಗಳ ಕುರಿತು ಮಾಹಿತಿ ಒದಗಿಸಬಹುದು ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಜಯಚಂದ್ರ, ಪ್ರಿಯಾಂಕ್ ಖರ್ಗೆ, ಮೇಲ್ಮನೆ ಸದಸ್ಯ ಗೋವಿಂದರಾಜು, ಅಪರ ಮುಖ್ಯ ಕಾರ್ಯದರ್ಶಿಗಳಾದ ರತ್ನಪ್ರಭ, ವಿಜಯ ಭಾಸ್ಕರ್, ವಾರ್ತಾ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಜಮೀನಿನ ಮಾಹಿತಿಯನ್ನು ಆಧಾರ್‌ಗೆ ಜೋಡಣೆ ಮಾಡುವುದರಿಂದ ‘ಭೂಮಿ’ ಮತ್ತು ಸರಕಾರದ ಯೋಜನೆಗಳ ಸೇವೆ ಪಡೆಯಲು ಅನುಕೂಲ. ರಾಷ್ಟ್ರದಲ್ಲೇ ಬೆಳೆ ಪರಿಹಾರ ವಿತರಿಸಲು ಡಿಜಿಟಲ್ ಪ್ಲಾಟ್‌ಫಾರಂನ್ನು ಸಮರ್ಥವಾಗಿ ಬಳಸಿಕೊಂಡ ರಾಜ್ಯ ಕರ್ನಾಟಕ. ಈ ವೇದಿಕೆಯ ಮೂಲಕ ಫಲಾನುಭವಿ 25 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆಯಾಗಿದೆ. ಅಲ್ಲದೆ, ಇಡೀ ದೇಶಕ್ಕೇ ಮಾದರಿ ಆ್ಯಪ್ ವಿನ್ಯಾಸಗೊಳಿಸಿರುವ ಪ್ರಪ್ರಥಮ ಹಾಗೂ ಏಕೈಕ ರಾಜ್ಯ ಕರ್ನಾಟಕ.
-ಕೃಷ್ಣಬ್ಙೈರೇಗೌಡ, ಕೃಷಿ ಸಚಿವ







