ರಾಜ್ಯ ಸರಕಾರ ನೌಕರರ ವೇತನ ಪರಿಷ್ಕರಣೆಗೆ ಕ್ರಮ ಕೈಗೊಂಡಿಲ್ಲ: ಆರೋಪ
ಶಿವಮೊಗ್ಗ, ಅ. 31: ಕೇಂದ್ರ ಸರಕಾರ ಕೇಂದ್ರ ನೌಕರರಿಗೆ ಈಗಾಗಲೇ 7 ನೆಯ ವೇತನ ಆಯೋಗ ಜಾರಿಗೆ ತಂದಿದೆ. ಆದರೆ ರಾಜ್ಯ ಸರಕಾರ ತನ್ನ ಅಧೀನದ ನೌಕರರ ವೇತನ ಪರಿಷ್ಕರಣೆಗೆ ಕ್ರಮಕೈಗೊಂಡಿಲ್ಲ. 6 ನೆ ವೇತನ ಆಯೋಗ ರಚಿಸಿ ವರ್ಷ ಕಳೆದರೂ ಆಯೋಗದ ವರದಿ ಅನುಷ್ಠಾನಕ್ಕೆ ಕ್ರಮಕೈಗೊಂಡಿಲ್ಲ ಎಂದು ರಾಜ್ಯಸಭೆ ಮಾಜಿ ಸದಸ್ಯ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ನಡುವೆ ವೇತನ ತಾರತಮ್ಯ ಹೆಚ್ಚಿದೆ. 6 ನೆ ವೇತನ ಆಯೋಗದಲ್ಲಿ ಇದನ್ನು ಜಾರಿಗೊಳಿಸಬೇಕು. ಕೇಂದ್ರ ಮತ್ತು ರಾಜ್ಯಸರಕಾರಿ ನೌಕರರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಕೆಲವು ಹುದ್ದೆಗಳಲ್ಲಿ ಶೇ. 200 ರಷ್ಟು ವ್ಯತ್ಯಾಸವಿದೆ. ತುಟ್ಟಿಭತ್ತೆಯಲ್ಲೂ ಕೂಡ ವ್ಯತ್ಯಾಸವಿದೆ. ಇದನ್ನು ರಾಜ್ಯ ಸರಕಾರ 6ನೆ ವೇತನ ಆಯೋಗದ ಸಂದರ್ಭದಲ್ಲಿ ಸರಿಪಡಿಸಬೇಕು ಎಂದರು.
ಸರಕಾರ ಅನೇಕ ಭಾಗ್ಯದಗಳನ್ನು ಜಾರಿಗೆ ತಂದಿದೆ. ಆದರೆ ಇವ್ಯಾವು ಸರಿಯಾಗಿ ನಡೆಯುತ್ತಿಲ್ಲ. ಸಂಬಳವನ್ನು ಹೆಚ್ಚಿಸದೇ ಸರಕಾರಿ ನೌಕರರನ್ನು ದುಡಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ. ಅಂಗನವಾಡಿಯಂತಹ ಕಾರ್ಯಕರ್ತರಿಗೆ ಕೊಡುವ ಸಂಬಳ ತುಂಬಾ ಕಡಿಮೆ ಎಂದರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಪ್ರಮುಖರಾದ ದತ್ತಾತ್ರಿ, ಎಂ.ಶಂಕರ್, ಎಚ್.ಆರ್. ಬಸವರಾಜಪ್ಪ, ಚಂದ್ರಶೇಖರ್, ಕೆ.ವಿ. ಅಣ್ಣಪ್ಪರತ್ನಾಕರ ಶೆಣೈ, ಬಿಳಕಿ ಕೃಷ್ಣಮೂರ್ತಿ, ತಸ್ವಿರ್ ಅಹ್ಮ್ಮದ್ ಇತರರಿದ್ದರು.







