ಮಹಿಳಾ ರಾಜಕಾರಣಿಗಳಿಗೆ ಇಂದಿರಾಗಾಂಧಿ ಮಾದರಿ: ಸೀತಾರಾಂ
ಮಡಿಕೇರಿ, ಅ.31: ದಿಟ್ಟ ಮಹಿಳೆ, ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಆದರ್ಶ ಹಾಗೂ ಧೈರ್ಯ ಇಂದಿನ ಮಹಿಳಾ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿರಾಗಾಂಧಿ ಅವರ ರಾಜಕೀಯ ಜೀವನದ ಬಗ್ಗೆ ವಿವರಿಸಿದ ಅವರು ದೇಶ ಕಂಡ ಅಪ್ರತಿಮ ನಾಯಕಿಯ ಗುಣವನ್ನು ಇಂದಿನ ಮಹಿಳೆಯರು ಮೈಗೂಡಿಸಿಕೊಳ್ಳಬೇಕೆಂದರು.
ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಮತ್ತಷ್ಟು ಪ್ರಯತ್ನಗಳು ನಡೆಯಬೇಕಾಗಿದ್ದು, ರಾಜ್ಯ ಮಾತ್ರವಲ್ಲದೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಕಾರ್ಯಕರ್ತರು ಶ್ರಮವಹಿಸಬೇಕಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಮತ್ತು ಪಕ್ಷದ ಅಭ್ಯರ್ಥಿಗಳ ಸೋಲಿಗೆ ಪರೋಕ್ಷವಾಗಿ ಕಾರಣರಾಗುವವರನ್ನು ಪಕ್ಷದಿಂದ ದೂರ ಇಡುವಂತೆ ಸಚಿವ ಸೀತಾರಾಂ ಸಲಹೆ ನೀಡಿದರು.
ಪ್ರತಿಯೊಬ್ಬರು ಪಕ್ಷ ನಿಷ್ಠೆಯನ್ನು ಪ್ರದರ್ಶಿಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿಯನ್ನು ಹೊಂದಬೇಕೆಂದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜಿ.ಆರ್. ಪುಷ್ಪಲತಾ, ಮಾತನಾಡಿದರು.
ರಾಜ್ಯ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳಾ ಕಾಂಗ್ರೆಸ್‌ನ ಜಿಲ್ಲಾ ಉಸ್ತುವಾರಿ ಶುಭ ದಾಯಿನಿ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿಪಂ ಸದಸ್ಯರಾದ ಕೆ.ಪಿ.ಚಂದ್ರಕಲಾ, ಕುಮುದಾ ಧರ್ಮಪ್ಪ, ಸುನೀತಾ, ಲೀಲಾವತಿ, ತಾಪಂ ಸದಸ್ಯರಾದ ಆಶಾ ಜೇಮ್ಸ್, ನಗರಸಭಾ ಸದಸ್ಯರಾದ ಜುಲೆಕಾಬಿ, ತಜುಸುಂ, ಕೆಪಿಸಿಸಿಯ ಪ್ರಧಾನ ಕಾರ್ಯ ದರ್ಶಿ ಹುಸೈನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕೂಬ್, ನಗರ ಕಾಂಗ್ರೆಸ್‌ನ ಅಧ್ಯಕ್ಷ ಕೆ.ಯು.ಅಬ್ದುಲ್ ರಝಾಕ್ ಮತ್ತು ಮಹಿಳಾಧ್ಯಕ್ಷೆ ಪಾರ್ವತಿ, ಪ್ರಮುಖರಾದ ಚುಮ್ಮಿದೇವಯ್ಯ, ಸುರಯ್ಯಿ ಅಬ್ರಾರ್, ಮಂಜುಳಾ, ಕುಸುಮಾ ಜೋಯಪ್ಪ, ಕಾವೇರಮ್ಮ, ಅಮೀನ, ತೆನ್ನಿರ ಮೈನಾ, ಕೆ.ಎಂ.ಲೋಕೇಶ್, ರಾಜಮ್ಮ ರುದ್ರಯ್ಯ ಮತ್ತಿತರರು ಪಾಲ್ಗೊಂಡಿದ್ದರು.







