ಸಿಪಿಐ: ಜಿಲ್ಲಾ ಸಮ್ಮೇಳನದ ಲೊಗೋ ಬಿಡುಗಡೆ

ಮಂಗಳೂರು, ಅ. 31: ಭಾರತ ಕಮ್ಯನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ 23ನೆ ಸಮ್ಮೇಳನವು 2017 ಡಿಸೆಂಬರ್ 24 ರಿಂದ 26 ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ.
ಸಮ್ಮೇಳನದ ಲೊಗೋವನ್ನು ಮಂಗಳವಾರ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಬಿಡುಗಡೆಗೊಳಿಸಿದರು.
ಕರಾವಳಿ ಜಿಲ್ಲೆಗಳು ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಜಾತಿ ಬೇಧಲ್ಲದೆ ಜನರು ಜೀವನ ನಡೆಸುತ್ತಿದ್ದಾರೆ. ವ್ಯಾಪಾರ ವಹಿವಾಟಿನಲ್ಲಿಯೂ ಒಬ್ಬರಿಗೊಬ್ಬರು ಸಹಕರಿಸಿ ವ್ಯವಹರಿಸುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಸ್ಚಿಯನ್ ಮತ್ತಿತರ ಧರ್ಮ ಬಾಂಧವರು ಶಾಂತಿ ಸಾಮರಸ್ಯವನ್ನು ಬಯಸುವ ಶಾಂತಿಪ್ರಿಯರಾಗಿದ್ದಾರೆ. ಆದರೆ ಕೆಲವೊಂದು ಜನರ ಕುಹಕದಿಂದಾಗಿ ಇತ್ತೀಚಿನ ದಿನಗಳಲ್ಲಿ ಕರಾವಳಿ ಜಿಲ್ಲೆಯ ಸೌಹಾರ್ದಕ್ಕೆ ಧಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಸಾಮರಸ್ಯವನ್ನು ಸಾರುವ ಉದ್ದೇಶ ಈ ಲೋಗೋದಲ್ಲಿ ಅಡಗಿದೆ. ಲೋಗೋದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರ ಆರಾಧಾನಾಲಯಗಳ ಸಂಕೇತಗಳಿವೆ. ಕರಾವಳಿ ಸಮುದ್ರ ತೀರದ ಸೊಬಗು, ಪಕ್ಷದ ಕಚೇರಿಯ ಚಿತ್ರದೊಂದಿಗೆ ಕತ್ತಿ-ಸುತ್ತಿಗೆ ಮತ್ತು ಕತ್ತಿ ತೆನೆಯನ್ನು ತೋರಿಸಿ ಜಿಲ್ಲಾ ಸಮ್ಮೇಳನದ ವಿವರ ನೀಡಲಾಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ತೋರಿಸುವ ಮೂಲಕ ಸ್ವಾತಂತ್ರ ಹೋರಾಟವನ್ನು ನೆನಪಿಸುವ ಚಿತ್ರಣದೆ ಎಂದು ತಿಳಿಸಿದರು.
ಲೊಗೋ ಬಿಡುಗಡೆಯ ಸಂಭ್ರಮದಲ್ಲಿ ಪಕ್ಷದ ನಾಯಕ ವಿ. ಎಸ್. ಬೇರಿಂಜ, ಕೆ. ತಿಮ್ಮಪ್ಪ, ಎಂ. ಕರುಣಾಕರ್, ಚಿತ್ರಾಕ್ಷಿ, ರಘು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.





