ಬಿಜೆಪಿ ಸಮಾಜವನ್ನು ಒಡೆದು ಅಧಿಕಾರ ನಡೆಸುತ್ತಿದೆ: ಡಾ. ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಅ.31: ಕಾಂಗ್ರೆಸ್ ಪಕ್ಷದ ಆಡಳಿತ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದರೆ, ಬಿಜೆಪಿ ಸಮಾಜವನ್ನು ಒಡೆದು ಅಧಿಕಾರ ನಡೆಸುತ್ತಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಛೇರಿ ಆವರಣದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಪುಣ್ಯತಿಥಿ ಅಂಗವಾಗಿ ಹಮ್ಮಿಕೊಂಡಿದ್ದ ಇಂದಿರಾ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿದ ಪ್ರತಿಹಂತದಲ್ಲೂ ಜನಪರ ಕೆಲಸ ಮಾಡುತ್ತಾ ಬಂದಿದೆ. ಅಂದು ಇಂದಿರಾಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣಗೊಳಿಸದೇ ಇದ್ದಲ್ಲಿ ಇಂದು ಆರ್ಥಿಕ ಪರಿಸ್ಥಿತಿ ಅದೋಗತಿ ಕಾಣುತ್ತಿತ್ತು. ಮಹಿಳೆಯರಿಗೆ ಮೀಸಲಾತಿ ನೀಡಿದ್ದೆ ಕಾಂಗ್ರೆಸ್ ಪಕ್ಷ ದೇಶದ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಸಾಕಷ್ಟು ಕೊಡುಗೆ ನೀಡಿದೆ. ಆದರೂ ಸಮಾಜವನ್ನು ಒಡೆದು ಆಳುವ ಬಿಜೆಪಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನಿಸುತ್ತಿರುವುದು ರ್ದುದೈವವೇ ಸರಿ ಎಂದರು.
ದಿ.ಇಂದಿರಾಗಾಂಧಿ ಅವರು ಪ್ರಧಾನಿಗಳಾಗಿದ್ದ ವೇಳೆ 20 ಅಂಶಗಳ ಕಾರ್ಯಕ್ರಮ ರೂಪಿಸಿ ಬಡತನ ಮುಕ್ತ ಭಾರತಕ್ಕೆ ಬುನಾದಿ ಹಾಕಿದರು. ಆದರೆ ಅಂದಿನ ವಿರೋಧ ಪಕ್ಷದವರು ಅವರ ವಿರುದ್ಧ ಮಸಲತ್ತು ನಡೆಸಿ ಕೆಲವು ಕಾಂಗ್ರೆಸ್ ಪಕ್ಷದ ಮುಖಂಡರುಗಳನ್ನು ಬಳಸಿಕೊಂಡು ಪಕ್ಷವನ್ನು ಒಡೆದರು. ಆದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿತು. ಆಗ ನಾನು ಅವಿಭಜಿತ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ ಎಂದು ನೆನಪಿಸಿಕೊಂಡರು.
ಇದೇ ವೇಳೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಂತಭಟ್, ಶುಭ ಐನಳ್ಳಿ ವಿಶ್ವಪ್ರಕಾಶ್, ಮುಸ್ಟೂರಮ್ಮ, ಅಂಜುಬಾನು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ವೀಕ್ಷಕರಾದ ಮೀನಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶ್ವಿನಿ ಪ್ರಶಾಂತ್, ಪಾಲಿಕೆ ಮೇಯರ್ ಅನಿತಾಬಾಯಿ ಮಾಲತೇಶ್, ಲತಿಕಾ ಶೆಟ್ಟಿ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕೆಪಿಸಿಸಿ ಸದಸ್ಯ ಡಿ.ಬಸವರಾಜ್, ಪರಿಶಿಷ್ಟ ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಉಪಮೇಯರ್ ಮಂಜಮ್ಮ ಹನುಮಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ದಿಲ್‍ಷಾದ್ ಷೇಕ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಆಶಾ ಮರಿಯೋಜಿರಾವ್ ಮತ್ತಿತರರಿದ್ದರು.







