'ನವ ಕರ್ನಾಟಕ-2025' ಸಮಗ್ರ ಅಭಿವೃದ್ಧಿಯ ದೂರದೃಷ್ಟಿ: ರೇಣುಕಾ ಚಿದಂಬರಂ

ಮಡಿಕೇರಿ, ಅ.31 : ಶ್ರೀಸಾಮಾನ್ಯರ ಅಪೇಕ್ಷೆ, ಆಕಾಂಕ್ಷೆ ಮತ್ತು ನಿರೀಕ್ಷೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ನವಕರ್ನಾಟಕ-2025 (ವಿಷನ್ ಡಾಕ್ಯುಮೆಂಟ್) ತಯಾರಿಸಲಾಗುತ್ತಿದ್ದು, ಈ ಡಾಕ್ಯುಮೆಂಟ್ ಮುಂದಿನ ಏಳು ವರ್ಷದಲ್ಲಿ ಇಡೀ ರಾಜ್ಯದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿ ಒಳಗೊಂಡಿದೆ ಎಂದು ಸರಕಾರದ ಅಪರ ಮುಖ್ಯಕಾರ್ಯದರ್ಶಿ ರೇಣುಕಾ ಚಿದಂಬರಂ ಹೇಳಿದ್ದಾರೆ.
ನಗರದ ಸಂತ ಜೋಸೆಫರ ಶಾಲೆಯಲ್ಲಿ ಮಂಗಳವಾರ ನಡೆದ ನವಕರ್ನಾಟಕ-2025 ಜಿಲ್ಲಾಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಮತ್ತು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಸಾರ್ವಜನಿಕರ ಸಲಹೆ, ಅಭಿಪ್ರಾಯ ಪಡೆಯಲಾಗುತ್ತಿದೆ. ಜನರ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ಈಡೇರಿಸುವುದು ಸರಕಾರದ ಮುಖ್ಯ ಉದ್ದೇಶವಾಗಿದೆ. ನವಕರ್ನಾಟಕ-2025 ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸರಕಾರದ ಅಪರ ಮುಖ್ಯಕಾರ್ಯದರ್ಶಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಜನರ ನಿರೀಕ್ಷೆ, ಆಶಯ ಮತ್ತು ಉದ್ದೇಶವನ್ನು ಈಡೇರಿಸುವುದರ ಜೊತೆಗೆ, ಕೊಡಗು ಜಿಲ್ಲೆ ಯಾವ ರೀತಿ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಮಾಹಿತಿ ತಯಾರಿಸಲಾಗುತ್ತಿದೆ ಎಂದು ಹೇಳಿದರು.
ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಪಂ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್‌ಕುಮಾರ್, ಟಿ.ಪಿ. ರಮೇಶ್ ಇದ್ದರು.
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಕೆ.ವಿ. ಸುರೇಶ್ ನಿರೂಪಿಸಿ, ವಂದಿಸಿದರು.







